ಬೆಂಗಳೂರು: ಕೇಂದ್ರ ಸರ್ಕಾರ ಆರ್.ಸಿ.ಇ.ಪಿ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯು ಪ್ರತಿಭಟನೆಯನ್ನು ನಡೆಸಿತು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಕಂದಾಯ ಭವನದ ಎದುರು ಪ್ರತಿಭಟನೆ ನಡೆಸಿದ ರೈತರು, ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ತಮ್ಮ ಕೋರಿಕೆಯನ್ನು ಸಲ್ಲಿಸಿದರು.
ರಾಜ್ಯದ ಬಹುತೇಕ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದು, ಹೈನುಗಾರಿಕೆ ರೈತರಿಗೆ ಜೀವನ ನಡೆಸಲು ಆಧಾರಸ್ತಂಭವಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರವು ಆರ್.ಸಿ.ಇ.ಪಿ ಒಪ್ಪಂದಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲವೆಂದು ರೈತ ಮುಖಂಡರು ಹೇಳಿದರು.
ಕೇಂದ್ರ ಸರ್ಕಾರವು 15 ದೇಶಗಳೊಂದಿಗೆ ಸೇರಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ (ಆರ್.ಸಿ.ಇ.ಪಿ) ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದು, ಇದರಿಂದಾಗಿ ದೇಶದ ಆಹಾರ ಮತ್ತು ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಗುರಿಯಾಗುತ್ತದೆ. ಇದರಿಂದ ಕೇವಲ ಹೈನುಗಾರಿಕೆ ಮಾತ್ರವಲ್ಲದೆ, ಅಡಿಕೆ, ಸಾಂಬಾರ ಪದಾರ್ಥಗಳು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುವ ರೈತರಿಗೆ ಸಂಕಷ್ಟ ಎದುರಾಗಲಿದೆ. ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳು ದೇಶದಲ್ಲಿ ತಲೆಯೆತ್ತಿ, ನಮ್ಮ ದೇಶದ ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳು ಉಳಿಗಾಲವಿಲ್ಲದಂತೆ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.