ಬೆಂಗಳೂರು: ನಿನ್ನೆ ಮತ್ತು ಇವತ್ತು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜಂಬೂ ಸವಾರಿ ನಡೆದಿದೆ. ದೇಶದ ದೊರೆ ರಾಜ್ಯಕ್ಕೆ ಬರುತ್ತಾರೆ ಎಂದರೆ ಆ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಡುತ್ತಾರೆ ಎಂಬ ವಿಶ್ವಾಸ ಇರುತ್ತೆ. ಆದರೆ, ಅದೆಲ್ಲಾ ಹುಸಿಯಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಸೀರೆ, ಉಡುಗೆಗಳನ್ನು ಕೊಟ್ಟು ಕಳಿಸುತ್ತಾರೆ. ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರು ನೀರಾವರಿ ಯೋಜನೆ, ನೆರೆ ಪರಿಹಾರಕ್ಕೆ ಹಣ ಕೊಡಿ ಎಂದು ಪ್ರಧಾನಿಗೆ ಕೇಳಿದ್ರೆ ಕೊಡುತ್ತೇನೆಂಬ ಭರವಸೆಯನ್ನೂ ಮೋದಿ ನೀಡಲಿಲ್ಲ. ಮೂರ್ನಾಲ್ಕು ಬಾರಿ ಮನವಿ ಮಾಡಿದ್ದೇನೆ, ಇದೀಗ ಮತ್ತೆ ಮನವಿ ಮಾಡುತ್ತಿದ್ದೇನೆಂದು ಸಿಎಂ ಹೇಳಿದ್ದಾರೆ. ಆದರೂ ಅದಾವುದಕ್ಕೂ ಪ್ರಧಾನಿ ಬೆಲೆ ಕೊಡಲಿಲ್ಲ. ಇದು ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಮಾಡಿದ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತುಮಕೂರಿನ ಸಿದ್ದ ಗಂಗಾಮಠಕ್ಕೆ ಬಂದಾಗ ವಿದ್ಯಾರ್ಥಿಗಳ ಮುಂದೆ ಶಿಕ್ಷಣ, ಸಂಸ್ಕೃತಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಪಾಕಿಸ್ತಾನ ಜೊತೆ ಹೆಚ್ಚಿನ ಸ್ನೇಹ ಇದ್ರೆ ಅದು ಬಿಜೆಪಿಯವರಿಗೆ. ಪಾಕ್‌ಗೆ ರೈಲು ಓಡಿಸಿದ್ದು, ನವಾಜ್ ಷರೀಫ್ಗೆ ಉಡುಗೊರೆ ಕಳುಹಿಸಿದ್ದು ಯಾರು?. ಕದ್ದು ಮುಚ್ಚಿ ಪಾಕ್‌ಗೆ ಹೋಗಿದ್ದು ಯಾರು ಎಂದು ಪ್ರಶ್ನಿಸಿದರು. ಪಾಕ್‌ನ ಜೊತೆ ಯುದ್ಧ ಮಾಡಿ ಗೆದ್ದೋರು ಕಾಂಗ್ರೆಸ್ನವರು. ಬಿಜೆಪಿಯವರಿಗೆ ತಾಕತ್ ಇದ್ರೆ ಪಾಕ್ ಜೊತೆ ಯುದ್ಧ ಮಾಡಿ ಎಂದು ಗುಡುಗಿದ ಉಗ್ರಪ್ಪ, ಕಾಂಗ್ರೆಸ್ ಪಾಕಿಸ್ತಾನ ಪರ ಅಂತಾ ಹೇಳೋದನ್ನು ಪ್ರಧಾನಿ ಮೋದಿಯವರು ಕೂಡಲೇ ನಿಲ್ಲಿಸಬೇಕು ಎಂದರು.
ಬಳ್ಳಾರಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ಇದು ಒಬ್ಬ ಶಾಸಕನ ಮನಸ್ಥಿತಿ ಅಲ್ಲ. ಶಾಸಕರ ಉದ್ಧಟತನದ ಹೇಳಿಕೆಗೆ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರ ಕುಮ್ಮಕ್ಕಿದೆ. ಹೀಗಾಗಿ ಇಂತಹ ಮಾತನ್ನು ಆಡುತ್ತಿದ್ದಾರೆ. ಸಮಾಜವನ್ನು ಒಡೆದು ಆಳುವ ಪ್ರವೃತ್ತಿ ಅವರದ್ದು, ಬಿಜೆಪಿಯವರಿಗೆ ಬದ್ಧತೆ ಇಲ್ಲ, ಸಂವಿಧಾನದ ಬಗ್ಗೆ ಗೊತ್ತಿಲ್ಲ. ಹೀಗಾಗಿ ಸಂವಿಧಾನದ ಆಶಯವನ್ನು ಬಿಜೆಪಿಯವರು ಗಾಳಿಗೆ ತೂರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಷ್ಟ್ರ, ರಾಜ್ಯ, ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯವರ ಮನಸ್ಥಿತಿ ಬಂದು ನಿಂತಿದೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅವರು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು. ಆಶಾ ಕಾರ್ಯಕರ್ತೆಯರು ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನೀಡುತ್ತಿರುವ ವೇತನ ಕಡಿಮೆ. ಹೆಚ್ಚಿನ ವೇತನಕ್ಕೆ ಆಗ್ರಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಅವರ ಬದುಕಿನ ಜೊತೆ ಚೆಲ್ಲಾಟ ಮಾಡೋದು ಬೇಡ. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಮಾತನಾಡಿ, ವಸತಿ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರವನ್ನು ಮೊದಲು ಸರಿಪಡಿಸಿ. ಅದನ್ನು ಬಿಟ್ಟು ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುವುದು ಸರಿಯಲ್ಲ. ಐದು ತಿಂಗಳು ಕಳೆದರೂ ವಿಪಕ್ಷ ನಾಯಕರಿಗೆ ಸಿಗಬೇಕಾದ ಸವಲತ್ತುಗಳು ಸಿಕ್ಕಿಲ್ಲ. ಸಿದ್ದರಾಮಯ್ಯನವರ ಮೇಲೆ ಇರುವ ಕೋಪದಿಂದ ಸರ್ಕಾರ ಸವಲತ್ತು ನೀಡದೆ ಸತಾಯಿಸುತ್ತಿದೆ. ಈಗಲಾದರೂ ಸಂವಿಧಾನ ಬದ್ಧವಾಗಿ ವಿಪಕ್ಷ ನಾಯಕನಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸ್ಪೀಕರ್ ಮನವಿ ಮಾಡಿದರು.