ಬೆಂಗಳೂರು : ಪಶ್ಚಿಮ ಘಟ್ಟದ ಎಲ್ಲಾ ಮನೆಗಳಲ್ಲಿ ಹುಲಿ ಉಗುರು, ಪ್ರಾಣಿಗಳ ಚರ್ಮ, ಕೊಂಬು ಇರೋದು ಸಾಮಾನ್ಯ. ಈಗ ಅವರನ್ನು ವಿಲನ್ ಮಾಡುವುದಕ್ಕೆ ಹೊರಟಿರುವುದು ತಪ್ಪು ಎಂದು ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೂರು ನಾಲ್ಕು ದಿನದಿಂದ ಹುಲಿ ಉಗುರು ವಿಚಾರ ಚರ್ಚೆಯಾಗ್ತಿದೆ. ನಾನು ಮಲೆನಾಡಿನವನಾಗಿದ್ದೇನೆ. ಮಾನವ ಆದಿಕಾಲದಿಂದ ಬೇಟೆ ಮಾಡಿ ಬದುಕಿದ್ದ. 25 ವರ್ಷಗಳಿಂದ ಯಾವುದೇ ಶಿಕಾರಿ ಮಾಡುತ್ತಿಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಲಾಗ್ತಿದೆ. ಪ್ರಾಣಿಗಳ ಯಾವುದಾದರು ಒಂದು ವಸ್ತು ಮನೆಯಲ್ಲಿ ಇರಬಹುದು. ಇದನ್ನು ಶಿಕಾರಿ ಮಾಡಿ ತಂದಿದ್ದಾರೆ ಎಂದು ಬಿಂಬಿಸಬಾರದು ಎಂದು ಮನವಿ ಮಾಡಿದರು.
ಅರಣ್ಯ ಅಧಿಕಾರಗಳ ಮನೆಯಲ್ಲೂ ಇದೆಲ್ಲಾ ಇರುತ್ತೆ. ಇದನ್ನೆಲ್ಲ ಅನ್ಯತಾ ಭಾವಿಸದೇ ಇಲ್ಲಿಗೆ ಕೊನೆಗೊಳಿಸಬೇಕು. ಮಲೆನಾಡು ಜನತೆ ಭಯಭೀತರಾಗಿದ್ದಾರೆ. ಎಲ್ಲೋ ಕಾದಾಡಿ ಬಿದ್ದಿರೋದನ್ನು ತಂದಿರ್ತಾರೆ. ಬೇಟೆಯಾಡಿ ಸಾಯಿಸಿ ಅದನ್ನು ತಂದಿರುವುದಲ್ಲ. ಸರ್ಕಾರ ಈ ಬಗ್ಗೆ ವಾರ್ನಿಂಗ್ ಕೊಟ್ಟು ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ದರ್ಶನ್, ನಿಖಿಲ್ ಕುಮಾರಸ್ವಾಮಿ, ಸ್ವಾಮೀಜಿ ಇವರ್ಯಾರು ಕಾಡಿಗೆ ಹೋಗಿ ಪ್ರಾಣಿಗಳ ವಸ್ತುಗಳನ್ನು ತಂದಿಲ್ಲ. ಪೊಲೀಸರು ಬಂಧನ ಮಾಡಿರೋದು ತಪ್ಪು. ಸುಮಾರು 30/40 ವರ್ಷದ ಹಿಂದೆ ತಂದು ಇಟ್ಟುಕೊಂಡಿರೋದು. ಕಾಡಿಗೆ ಹೋಗಿ ತಂದಿರೋದಲ್ಲ. ಮಲೆನಾಡಿನವರನ್ನು ಈ ರೀತಿ ನೋಡುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಅಧಿಕಾರಿಗಳ ಮನೆಯಲ್ಲಿ ಇದ್ದಾವೆ. ಅವರೇ ಸಾರ್ವಜನಿಕರ ಮನೆಗಳಿಗೆ ಹೋಗ್ತಾರೆ. ಅಲಂಕಾರಕ್ಕೂ ಅದನ್ನು ಯಾರು ತರುತ್ತಿಲ್ಲ. ಈ ವಿಷಯವನ್ನು ಇಲ್ಲಿಗೆ ಅಂತ್ಯ ಮಾಡಬೇಕು ಎಂದು ತಿಳಿಸಿದರು.
ಹುಲಿ ಉಗುರು ಪೆಂಡೆಂಟ್ ಪ್ರಕರಣ : ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣ ಸಂಬಂಧ ಬಿಗ್ ಬಾಸ್ ಸ್ಪರ್ಧಿ ಅತ್ತೂರು ಸಂತೋಷ್ ಅವರನ್ನು ಮೊದಲು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಹುಲಿ ಉಗುರು ಪೆಂಡೆಂಟ್ ಧರಿಸಿರುವ ಸಂಬಂಧ ನಟ ದರ್ಶನ್, ಸಂಸದ ಹಾಗೂ ನಟ ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಕಾಂಗ್ರೆಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಹಾಗೂ ಅಳಿಯನ ಮನೆಯಲ್ಲಿ ಅರಣ್ಯ ಅಧಿಕಾರಿಗಳ ಶೋಧ ಕಾರ್ಯ ನಡೆಸಿದ್ದರು. ಇದೀಗ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು.
ಇದನ್ನೂ ಓದಿ : ಚಿಕ್ಕಮಗಳೂರು: ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು