ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ವಶಕ್ಕೆ ಪಡೆದುಕೊಂಡಿದ್ದ ಐವರ ಪೈಕಿ ಮೂವರ ಮನೆಗಳ ಮೇಲೆ ಎಸ್ಐಟಿ ದಾಳಿ ನಡೆಸಿದೆ.
ಸಿಆರ್ ಪಿಸಿ 94 ಸೆಕ್ಷನ್ ಪ್ರಕಾರ ವಶಕ್ಕೆ ಪಡೆದುಕೊಂಡು ಐವರ ಪೈಕಿ ಮೂವರ ಮನೆಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ನಾಪತ್ತೆಯಾಗಿರುವ ಇಬ್ಬರು ಶಂಕಿತರ ಪತ್ತೆ ಕಾರ್ಯವನ್ನು ಎಸ್ಐಟಿ ಚುರುಕುಗೊಳಿಸಿದೆ. ನಾಪತ್ತೆಯಾಗಿರುವ ಇಬ್ಬರು ರಾಜಕೀಯ ನಾಯಕರೊಂದಿಗೆ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಶಂಕಿತ ಆರೋಪಿಗಳಿಗಾಗಿ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಬೆಂಗಳೂರಿನಲ್ಲಿ ವಿಡಿಯೊ ಅಪ್ ಲೋಡ್ ಮಾಡಿ ವರ್ಚುಯಲ್ ಪ್ರೈವೇಟ್ ನೆಟ್ ವರ್ಕ್ (ವಿಪಿಎನ್) ಮುಖಾಂತರ ರಷ್ಯಾದಲ್ಲಿ ಅಪ್ ಲೋಡ್ ಮಾಡಿರುವಂತೆ ಆರೋಪಿಗಳು ಬಿಂಬಿಸಿದ್ದಾರೆ.
ನಿನ್ನೆ ಸಂಜೆ ಸುಮಾರು 8 ಗಂಟೆಗಳ ಕಾಲ ನಡೆದ ವಿಚಾರಣೆ ನಡೆಸಿದ ಎಸ್ಐಟಿ ಬಲೆ ಬಿದ್ದವರಿಂದ ಹಲವು ಮಾಹಿತಿ ಕಲೆ ಹಾಕಿದೆ. ಪ್ರಕರಣದಲ್ಲಿ ನಾಪತ್ತೆಯಾಗಿರುವ ಇಬ್ಬರು ಮೂರು ದಿನಗಳ ಹಿಂದೆ ಗೌರಿಬಿದನೂರಿನಲ್ಲಿ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದನ್ನು ಪೊಲೀಸರು ಕಂಡುಕೊಂಡಿದ್ದರು. ಆಂಧ್ರ ಹಾಗೂ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಎಸ್ಐಟಿಗೆ ಲಭ್ಯವಾಗಿದೆ.
ಓದಿ: ಸಿಡಿ ಪ್ರಕರಣ: ರಷ್ಯಾ ವೆಬ್ಸೈಟ್ನಲ್ಲೂ ಅಪ್ಲೋಡ್ ಆಗಿತ್ತಂತೆ ವಿಡಿಯೋ..!?
ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ನೀಡಲು ಸಿದ್ಧತೆ : ಪ್ರಕರಣ ದೂರುದಾರನಾಗಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಎಸ್ ಐಟಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡುವಾಗ ಅಪರಿಚಿತ ವ್ಯಕ್ತಿ ಸಿಡಿ ನೀಡಿದ್ದರು ಎಂಬ ಹೇಳಿಕೆ ನೀಡಿದ್ದರು. ವಶಕ್ಕೆ ಪಡೆದುಕೊಂಡ ಐವರಲ್ಲಿ ಓರ್ವನೇ ಸಿಡಿ ನೀಡಿರುವುದು ಮೆಲ್ನೋಟಕ್ಕೆ ತಿಳಿದು ಬಂದಿದೆ. ಇವರು ನೀಡಿದ ಹೇಳಿಕೆ ಆಧರಿಸಿ ದಿನೇಶ್ ಕಲ್ಲಹಳ್ಳಿ ನೋಟಿಸ್ ನೀಡಿ ವಿಚಾರಣೆ ನಡೆಸಲು ಎಸ್ಐಟಿ ಮುಂದಾಗಲಿದೆ ಎನ್ನಲಾಗುತ್ತಿದೆ.