ಬೆಂಗಳೂರು: ಕೆಪಿಸಿಸಿಗೆ ಶೀಘ್ರವೇ ಅಧ್ಯಕ್ಷರನ್ನು ನೇಮಿಸಿ, ಕಾರ್ಯಾಧ್ಯಕ್ಷರ ನೇಮಕದ ತುರ್ತು ಸದ್ಯಕ್ಕಿಲ್ಲ ಎಂದು ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಪಕ್ಷದ ಹೈಕಮಾಂಡ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇ ಮೇಲ್ ಮೂಲಕ ಮಾಜಿ ಡಿಸಿಎಂ ಹೈಕಮಾಂಡ್ ನಾಯಕರಿಗೆ ಅದರಲ್ಲೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿಂದಿನ ಅಧ್ಯಕ್ಷರಾದ ರಾಹುಲ್ ಗಾಂಧಿಗೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಸೋನಿಯಾ ಗಾಂಧಿಗೆ ಮಾಡಿರುವ ಇ ಮೇಲ್ನಲ್ಲಿ, 2013ರ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷದ ಪುನರುತ್ಥಾನ ರಾಜ್ಯದಲ್ಲಿ ಆಗಬೇಕು. ಹೀಗಾಗಿ ಸಾಮಾಜಿಕ ನ್ಯಾಯ ಪರಿಗಣಿಸಿ ಅಧ್ಯಕ್ಷರನ್ನು ನೇಮಿಸಿ. ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕದ ಅವಶ್ಯಕತೆ ಸದ್ಯಕ್ಕಿಲ್ಲ ಎಂದು ತಾವು ಮಾಡಿರುವ ಇ ಮೇಲ್ನಲ್ಲಿ ಅವರು ತಿಳಿಸಿದ್ದಾರೆ.
ಇನ್ನು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಈಶ್ವರ್ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್.ಆರ್.ಪಾಟೀಲ್ ಬೆಳಗಾವಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಹಿಂದುಳಿದ ವರ್ಗದವರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದು, ಅವರು ಮೈಸೂರು ಭಾಗವನ್ನು ಪ್ರತಿನಿಧಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಬೆಂಗಳೂರು ವಿಭಾಗದವರಾಗುತ್ತಾರೆ. ಹೀಗಾಗಿ ಪ್ರಾದೇಶಿಕ, ಜಾತಿವಾರು ಕಾರ್ಯಾಧ್ಯಕ್ಷರ ನೇಮಕ ಆಗಬೇಕೆಂಬ ಗೊಂದಲ ಬೇಡ ಎಂದಿದ್ದಾರೆ.
ಅಲ್ಲದೇ ಜಾತಿ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬೇಡ ಎಂದಿರುವ ಅವರು, ಇದಕ್ಕೆ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ಕೆ.ಹೆಚ್.ಮುನಿಯಪ್ಪ ಸಲಹೆಯನ್ನು ಉಲ್ಲೇಖಿಸಿದ್ದಾರೆ. ಸದ್ಯ ವಿದೇಶ ಪ್ರವಾಸದಲ್ಲಿರುವ ಕಾರಣ ಈ ಪತ್ರಕ್ಕೆ ಸೋನಿಯಾ ಗಾಂಧಿ ಅವರಿಂದ ಪ್ರತಿಕ್ರಿಯೆ ಬಂದಿಲ್ಲ.