ಬೆಂಗಳೂರು : ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಲೋಕಾರ್ಪಣೆಯಾಗುತ್ತಿದ್ದು, ಈ ಪ್ರಯುಕ್ತ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ವಿತರಣೆ ಕಾರ್ಯಕ್ರಮಕ್ಕೆ ಇಂದು ಬೆಳಗ್ಗೆ ಮಾಜಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಅವರು ಚಾಲನೆ ನೀಡಿದ್ದಾರೆ.
ಮಲ್ಲೇಶ್ವರದ 4ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ ಬಳಿ ಇರುವ ಶ್ರೀಧರನ್ ಅವರ ನಿವಾಸ ಹಾಗೂ ಸವಿತಾ ರಾಜಗೋಪಾಲ್ ಅವರ ನಿವಾಸಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಶ್ರೀರಾಮ ಭಕ್ತರೊಂದಿಗೆ ತೆರಳಿ ಪವಿತ್ರ ಮಂತ್ರಾಕ್ಷತೆಯನ್ನು ವಿತರಿಸಿ, ಪ್ರಭು ಶ್ರೀರಾಮನ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥ್ ನಾರಾಯಣ್ ಅವರು "ಈ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದು, ನಮ್ಮ ಮಲ್ಲೇಶ್ವರದಲ್ಲಿ ವಿಶೇಷವಾಗಿ ಹಬ್ಬದಂತೆ ಸದ್ಭಕ್ತಿಯಿಂದ ಆಚರಿಸೋಣ" ಎಂದು ಕರೆ ನೀಡಿದರು.
ತಮ್ಮ ನಿವಾಸಕ್ಕೆ ರಾಮಭಕ್ತರೊಂದಿಗೆ ಆಗಮಿಸಿದ ಡಾ. ಅಶ್ವತ್ಥನಾರಾಯಣ್ ಅವರಿಗೆ ತಿಲಕ ಹಚ್ಚಿ, ಅತ್ಯಂತ ಆದರದಿಂದ ಬರಮಾಡಿಕೊಂಡ ಸವಿತಾ ರಾಜಗೋಪಾಲ್ ಹಾಗೂ ಕುಟುಂಬದವರು ಎಲ್ಲರಿಗೂ ಸಿಹಿ ವಿತರಿಸಿ, ಶುಭ ಕೋರಿದರು. ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಂತ್ರಾಕ್ಷತೆಯನ್ನು ಸ್ವೀಕರಿಸುವ ವೇಳೆ ಎಲ್ಲರೂ "ಜೈ ಶ್ರೀರಾಮ್" ಘೋಷಣೆ ಕೂಗುವ ಮೂಲಕ ಸಂತಸ ಹಂಚಿಕೊಂಡರು.
ಇಂದಿನಿಂದ ಜನವರಿ 15ರ ವರೆಗೆ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಅಬಿಯಾನ ಜರುಗಲಿದ್ದು, ಮಂತ್ರಾಕ್ಷತೆಯೊಂದಿಗೆ ಶ್ರೀರಾಮ ದೇವರ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ : ದಾವಣಗೆರೆಗೆ ತಲುಪಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ: ಕಳಶ ಹೊತ್ತು ಮೆರವಣಿಗೆ ಸಾಗಿದ ಮಹಿಳೆಯರು