ಬೆಂಗಳೂರು : ನಮ್ಮ ಕಾಲದ ಆರೋಪಗಳನ್ನು ತನಿಖೆ ಮಾಡಿ ಎಂದು ಮುಕ್ತವಾಗಿ ಹೇಳಿದ್ದೇವೆ. ಆದರೆ ಅವರ ಕಾಲದ ಆರೋಪಗಳ ಬಗ್ಗೆಯೂ ತನಿಖೆ ಮಾಡಬೇಕು, ಅದಕ್ಯಾಕೆ ಹಿಂದೇಟು ಹಾಕುತ್ತಿದ್ದಾರೆ? ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ, ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಇದೆ ಎಂದು ವಿಚಾರಣಾ ಆಯೋಗ ರಚನೆ ಮಾಡಿದ ಸರ್ಕಾರದ ನಡೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ-3 ಸಕ್ಸಸ್ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ನಾಗಸಂದ್ರದ ಖಾಸಗಿ ಅಪಾರ್ಟ್ಮೆಂಟ್ ನಿವಾಸಿಗಳಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಇಸ್ರೋ ವಿಜ್ಞಾನಿಗಳಾದ ಮಹೇಶ್ ಚಾವ್ಲಾ, ಕಲ್ಪನಾ ಅರವಿಂದ್, ಹಾಗೂ ಆಕಾಂಕ್ಷಾ ಅರವಿಂದ್ ಅವರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಇಸ್ರೋ ವಿಜ್ಞಾನಿಗಳ ಅಭಿನಂದಿಸಲು ಮೋದಿ ಆಗಮಿಸಿದ ವೇಳೆ ಪ್ರೋಟೋಕಾಲ್‌ನಲ್ಲಿ ಯಾವುದೇ ಗೊಂದಲ ಇರಲಿಲ್ಲ. ನಾವೆಲ್ಲ ಸೇವೆ ಮಾಡಲು ಸಾರ್ವಜನಿಕ ಜೀವನಕ್ಕೆ ಬಂದಿದ್ದೇವೆ. ಇಸ್ರೋದಂಥ ಸಂಸ್ಥೆ, ವಿಜ್ಞಾನಿಗಳು ಇಂಥ ದೊಡ್ಡ ಸಾಧನೆ ಮಾಡಿದಾಗ ನಾವು ಒಂದು ಹೆಜ್ಜೆ ಹಿಂದೆ ಸರಿಯಬೇಕು. ನಾವು ಹಿಂದೆ ಸರಿದು ಅವರಿಗೆ ಮಹತ್ವ ಕೊಡಬೇಕು. ಆ ಕೆಲಸವನ್ನು ನಮ್ಮ ನಾಯಕರು ಮಾಡಿದ್ದಾರೆ. ಸೇವಾ ಮನೋಭಾವದಿಂದ ಸಾಮಾನ್ಯ ಜನರ ನಡುವೆ ನಮ್ಮ ನಾಯಕರು ಇದ್ದು ಕೆಲಸ ಮಾಡಿದ್ದಾರೆ. ಅದನ್ನು ತಿಳಿದುಕೊಳ್ಳುವ, ಹೊಗಳುವ ಮನಸುಗಳು ಬೇಕಷ್ಟೇ. ಇಸ್ರೋ ಅಧ್ಯಕ್ಷರು ಮೂರು ನಿಮಿಷ ಮಾತಾಡಿ ಸಾಧನೆಗೆ ಕಾರಣರಾದವರನ್ನು ಮುಂದೆ ಬಿಟ್ಟರು. ಇದರರ್ಥ ಇಸ್ರೋ ಅಧ್ಯಕ್ಷರು ಹಿಂದೆ ಸರಿದರು ಅಂತರ್ಥವಲ್ಲ ಎಂದು ಹೇಳಿದರು.
ನಮ್ಮ ನಾಯಕರು ಹಿಂದೆ ಸರಿದು ನಿಂತು ಜನರನ್ನು ಮುಂದೆ ಬಿಟ್ಟಿದ್ದಾರೆ. ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿಯವರು ಬಂದಾಗ ಜನರ ಮಧ್ಯೆ ನಮ್ಮ ನಾಯಕರು ನಿಂತಿದ್ದಾರೆ. ನಮ್ಮ ನಾಯಕರು ಅತ್ಯಂತ ಮಾದರಿಯಾದ ಅನುಕರಣೀಯ ನಡವಳಿಕೆ ತೋರಿದ್ದಾರೆ. ಇವತ್ತಿನ ದಿನ ಎಲ್ಲರೂ ತಮ್ಮ ಸ್ಥಾನಮಾನಕ್ಕೆ ಪೈಪೋಟಿ ಮಾಡ್ತಾರೆ. ನಮ್ಮ ನಾಯಕರು ಅತ್ಯಂತ ಅನುಕರಣನೀಯ ಮಾದರಿ ಅನುಸರಿಸಿದ್ದಾರೆ. ಬೀದಿ ಪಾಲಾದರು, ಬ್ಯಾರಿಕೇಡ್ ಬಂಧಿ ಆದ್ರು ಅಂತ ಕಾಂಗ್ರೆಸ್ ನವ್ರು ಹೇಳಿರೋದು ಅವರ ಮನಸ್ಥಿತಿ ತೋರಿಸುತ್ತದೆ. ಇದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳಲ್ಲ ಎಂದು ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯೆ ನೀಡಿದರು. ಮೋದಿ ಸ್ವಾಗತಕ್ಕೆ ಬರದೇ ಎಸ್ ಟಿ ಸೋಮಶೇಖರ್ ಅಸಮಾಧಾನ ವಿಚಾರ ಕುರಿತು ಮಾತನಾಡಿ, ನಾನು ನಿನ್ನೆ ಇರಲಿಲ್ಲ. ಸೋಮಶೇಖರ್ ಜತೆ ಮಾತನಾಡುತ್ತೇನೆ ಎಂದರು.
ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ ಹುನ್ನಾರ : 40% ಕಮಿಷನ್, ಕೋವಿಡ್ ಅಕ್ರಮಗಳ ತನಿಖೆಗೆ ವಿಚಾರಣಾ ಆಯೋಗಗಳ ರಚನೆ ಮಾಡಲಾಗಿದೆ. ವಿಚಾರಣೆ ಆಗಲಿ, ತನಿಖೆ ಆಗಲಿ ಇದರಲ್ಲಿ ಆಶ್ಚರ್ಯ ಏನಿಲ್ಲ. ಈಗಾಗಲೇ ಪಿಎಸ್‌ಐ ನೇಮಕಾತಿ ಕೇಸ್ ತನಿಖೆ ನಡೆದು ಚಾರ್ಜ್‌ಶೀಟ್ ಆಗಿದೆ. ಇವರು ಚಾರ್ಜ್‌ಶೀಟ್ ನಲ್ಲಿರೋರ ರಕ್ಷಣೆ ಮಾಡ್ತಾರಾ ಅಥವಾ ಇನ್ನೊಂದು ಆಯಾಮದಲ್ಲಿ ತನಿಖೆ ಮಾಡ್ತಾರಾ?. ಪಿಎಸ್‌ಐ ಕೇಸ್ನ ತನಿಖೆಯೂ ಪೊಲೀಸರೇ ಮಾಡಬೇಕು. ಯಾವ ರೀತಿ ತನಿಖೆ ಮಾಡ್ತಾರೆ ಅಂತ ನೋಡೋಣ ಎಂದು ಹೇಳಿದರು.
40% ಆರೋಪದಲ್ಲಿ ನಿರ್ದಿಷ್ಟ ಪ್ರಕರಣ ಇಲ್ಲ, ದಾಖಲೆ ಇಲ್ಲ. ಎರಡು ವರ್ಷವಾದರೂ ಅವರು ದಾಖಲೆ ಕೊಟ್ಟಿಲ್ಲ. ಲೋಕಾಯುಕ್ತ ಎದುರು ಹೆಚ್ಚು ಟೆಂಡರ್ ಕೊಟ್ಟ ಹಲವು ಪ್ರಕರಣಗಳು ಇವೆ. ಇವುಗಳನ್ನು ತನಿಖೆಗೆ ಕೊಡ್ತಾರಾ? ಹೊಸ ದೂರು ಕೊಟ್ರೆ ಇವರು ಸೇರಿಸಿಕೊಳ್ತಾರಾ? ಭ್ರಷ್ಟಾಚಾರ ಯಾವತ್ತಿದ್ರೂ ಭ್ರಷ್ಟಾಚಾರವೇ, ಅವರ ಕಾಲದ ಆರೋಪಗಳನ್ನು ತನಿಖೆ ಮಾಡ್ತಾರಾ? ನಮ್ಮ ಕಾಲದ ಆರೋಪಗಳನ್ನು ತನಿಖೆ ಮಾಡಿ ಅಂತ ಮುಕ್ತವಾಗಿ ಹೇಳಿದ್ದೇವೆ. ಆದರೆ ಅವರ ಕಾಲದ ಆರೋಪಗಳ ಬಗ್ಗೆಯೂ ತನಿಖೆ ಮಾಡಲಿ ಅದಕ್ಯಾಕೆ ಹಿಂದೇಟು ಹಾಕ್ತಿದಾರೆ? ಇದರಲ್ಲಿ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ, ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಇದೆ ವಾಗ್ದಾಳಿ ನಡೆಸಿದರು.
ರಕ್ಷಾಬಂಧನ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಇಂದು ಬೆಂಗಳೂರಿನ ನಾಗಸಂದ್ರದ ಶೋಭಾ ಅಪಾರ್ಟ್ಮೆಂಟ್ ನಲ್ಲಿ ನಡೆದ "ರಕ್ಷಾಬಂಧನದ ಉತ್ಸವ" ದಲ್ಲಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು. ನಮ್ಮ ರಾಷ್ಟ್ರೀಯತೆ ಹಾಗೂ ನಮ್ಮ ಸಂಸ್ಕೃತಿಗಳ ರಕ್ಷಣೆಗಾಗಿ ಪರಸ್ಪರ ರಕ್ಷೆಗಳನ್ನು ಕಟ್ಟಲಾಯಿತು.
ಇದನ್ನೂ ಓದಿ : ರಾಜ್ಯ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಸಂಭ್ರಮಾಚರಣೆ ಅರ್ಥಹೀನ: ಎಎಪಿ ಉಪಾಧ್ಯಕ್ಷ ಮೋಹನ್ ದಾಸರಿ
ವಿಜ್ಞಾನ, ಆಧ್ಯಾತ್ಮ ಒಗ್ಗೂಡಿಸಿದ ಮೋದಿ: ಚಂದ್ರನ ಅಂಗಳದಲ್ಲಿ ಸೆಟಲೈಟ್ ಸ್ಪರ್ಶ ಮಾಡಿದ ಸ್ಥಳಕ್ಕೆ ಶಿವಶಕ್ತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನಾಮಕರಣ ಮಾಡುವ ಮೂಲಕ ವಿಜ್ಞಾನ ಮತ್ತು ಆಧ್ಯಾತ್ಮವನ್ನು ಒಗ್ಗೂಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಇಸ್ರೊ ವಿಜ್ಞಾನಿಗಳ ನಿರಂತರ ಶ್ರಮದ ಫಲವಾಗಿ ಭಾರತ ವಿಶ್ವ ಮಟ್ಟದಲ್ಲಿ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದರು.
ಇಸ್ರೋ ವಿಜ್ಞಾನಿಗಳ ಒಗ್ಗಟ್ಟಿನ ಶ್ರಮದ ಫಲವಾಗಿ ಚಂದ್ರಯಾನ 3 ಯಶಸ್ವಿಯಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಘನತೆ ಹೆಚ್ಚಾಗುವಂತೆ ಮಾಡಿದ್ದಲ್ಲದೇ ವಿಜ್ಞಾನ ಮತ್ತು ಆಧ್ಯಾತ್ಮವನ್ನೂ ಬೆಸೆಯುವಂತೆ ಮಾಡಿದೆ ಎಂದು ತಿಳಿಸಿದರು.