ಬೆಂಗಳೂರು: ಉದ್ಯೋಗ, ಶಿಕ್ಷಣ ಹಾಗೂ ವ್ಯವಹಾರ ಸೇರಿದಂತೆ ಇತರೆ ಉದ್ದೇಶಗಳಿಗಾಗಿ ವಿದೇಶಗಳಲ್ಲಿ ಮೂರು ಕೋಟಿಗೂ ಹೆಚ್ಚು ಭಾರತೀಯರು ನೆಲೆಸಿ ಅನೇಕ ಉನ್ನತ ಹುದ್ದೆಗಳಲ್ಲಿ ಹೆಸರು ಮಾಡಿದ್ದಾರೆ. ವಿದೇಶಕ್ಕೆ ಅನೇಕ ಕಾರಣಗಳಿಗಾಗಿ ತೆರಳುವ ಭಾರತೀಯರಿಗಾಗಿ ಅನುಕೂಲವಾಗುವಂತ ಯೋಜನೆಗಳನ್ನು ಕೇಂದ್ರ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಹೇಳಿದರು.
ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಮತ್ತು ಕಾನೂನಾತ್ಮಕ ವಲಸೆ, ಪಾಸ್‍ಪೋರ್ಟ್ ಸೇವೆಗಳು, ಭಾರತೀಯ ಸಂಜಾತರ ಒಳಗೊಳ್ಳುವಿಕೆ ಮತ್ತು ವಿದೇಶಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದು ದಿನದ “ವಿದೇಶಿ ಸಂಪರ್ಕ” ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ಅನೇಕ ಕಾರ್ಯಕ್ರಮ ಜಾರಿಗೆ ತಂದಿದ್ದು, ಅವುಗಳನ್ನು ಸರಳೀಕರಿಸಿ, ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶದಿಂದ ಇಂತಹ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅತ್ಯುತ್ತಮ ಪ್ರತಿಭೆಗಳನ್ನು ನೀಡಿದ ಕೀರ್ತಿ ಪಡೆದ ರಾಜ್ಯವಾಗಿದೆ ಎಂದು ತಿಳಿಸಿದರು.
ಪಾಸ್‍ಪೋರ್ಟ್ ವ್ಯವಸ್ಥೆಯನ್ನು ಸರಳೀಕರಿಸಲು ವಿದೇಶಾಂಗ ಸಚಿವಾಲಯ ಮೊಬೈಲ್ ಆಪ್ನ್ನು ಹೊರತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ವೀಸಾ ಕುರಿತು 170 ದೇಶಗಳೊಂದಿಗೆ ಈ-ವೀಸಾ ಸೇವೆಯನ್ನು ಆರಂಭಿಸಿದ್ದು, ಇದರಿಂದ ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ಅನುಕೂಲಕರವಾಗಲಿದೆ. ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಭಾರತೀಯರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ 24x7 ಸಮಯ ಕಾರ್ಯನಿರ್ವಹಿಸುವ ಕಾಲ್ ಸೆಂಟರ್ ತೆರೆಯಲಾಗಿದ್ದು, ವಿದೇಶಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ನೆಲೆಸಿರುವ ಭಾರತೀಯರು ಅಲ್ಲಿನ ರಾಯಬಾರಿ ಕಚೇರಿಗಳಲ್ಲಿ ನೋಂದಾಯಿಸುವ ಜವಬ್ದಾರಿಯನ್ನು ಮರೆಯಬಾರದು ಎಂದರು. ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್‍ಪೋರ್ಟ್ ಪಡೆಯುವ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಕೈ ಜೋಡಿಸುವ ಮೂಲಕ ವಿದೇಶ ಯಾತ್ರೆ ಅಥವಾ ವಿದೇಶಿಗರ ಆಗಮನದ ಬಗ್ಗೆ ಹೆಚ್ಚಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ವಿದೇಶಿ ಪ್ರಯಾಣಗಳಿಗೆ ಸಂಬಂದಿಸಿದಂತೆ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತರಬೇಕಾದ ಅವಶ್ಯಕತೆಯಿದೆ. ಅತ್ಯಂತ ಹೆಚ್ಚು ಅನಿವಾಸಿ ಭಾರತೀಯರು ಇರುವ ರಾಜ್ಯ ನಮ್ಮದಾಗಿದ್ದು, ಒಟ್ಟಾರೆಯಾಗಿ ಈಗಿರುವ ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು ಎಂದು ಸೂಚಿಸಿದರು. ಕರ್ನಾಟಕದವರು ಅಮೇರಿಕಾ ದೇಶದ ವೀಸಾ ಪಡೆಯಲು ಚೆನ್ನೈನಲ್ಲಿರುವ ಅಮೇರಿಕಾ ಎಂಬೆಸ್ಸಿಯ ಕಚೇರಿಗೆ ಅಲೆದಾಡಬೇಕಾಗಿದ್ದು, ಅವರ ವೀಸಾ ನೀಡುವ ಕಚೇರಿಯನ್ನು ಬೆಂಗಳೂರಿನಲ್ಲಿಯೇ ಆರಂಭಿಸಲು ಕ್ರಮಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ವಿದೇಶಿದಲ್ಲಿ ಭಾರತೀಯರು ಮರಣ ಹೊಂದಿದಾಗ ಅವರ ಶವವನ್ನು ತಾಯ್ನಾಡಿಗೆ ತರುವ ಕೆಲಸ ಅತ್ಯಂತ ಕ್ಲಷ್ಟಕರವಾಗಿದ್ದು, ಈ ಕುರಿತಂತೆ ವಿದೇಶಗಳೊಂದಿಗೆ ಚರ್ಚಿಸಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರಳೀಕರಿಸಬೇಕು ಎಂದು ಹೇಳಿದರು. ವಿದೇಶಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು ಮತ್ತು ಅಲ್ಲಿನ ಎರಡನೆಯ ಪ್ರಜೆಗಳಾಗಿ ನೋಡುತ್ತಿರುವ ಮನೋಭಾವ ಅತ್ಯಂತ ಕೆಟ್ಟದ್ದು ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಮಾತನಾಡಿ, ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ಪಾಸ್‍ಪೋರ್ಟ್ ಪಡೆಯುವಾಗ ಇದ್ದ ಪೊಲೀಸ್ ಪರಿಶೀಲನೆಯನ್ನು ಆನ್‍ಲೈನ್‍ಗೊಳಿಸಿ ಪ್ರತಿ ಪೊಲೀಸ್ ಸ್ಟೇಷನ್ಗೆ ಟ್ಯಾಬ್ ನೀಡಲಾಗಿದೆ ಎಂದು ತಿಳಿಸಿದರು. ಈ ಹಿಂದೆ ಪೊಲೀಸ್ ಇಲಾಖೆಗೆ ಪಾಸ್‍ಪೋರ್ಟ್ ಪಡೆಯುತ್ತಿರುವವರ ಪರಿಶೀಲನೆ ನಡೆಸಿ ವರದಿ ನೀಡಲು ಕನಿಷ್ಟ 30 ದಿನಗಳು ಬೇಕಾಗಿತ್ತು. ಆನ್‍ಲೈನ್ ಆದನಂತರ ಕೇವಲ 8 ರಿಂದ10 ದಿನಗಳಲ್ಲಿ ಪರಿಶೀಲನೆ ಪೂರ್ಣಗೊಳ್ಳಲಿದೆ. ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಜಾರಿಗೆ ತರಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಭಟ್ಟಚಾರ್ಯ, ಡಿಜಿಪಿ ಪ್ರವೀಣ್ ಸೂದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಹೇಮಾಲತ, ಜಂಟಿ ಕಾರ್ಯದರ್ಶಿ ಡಾ. ವಿಜಯ ಮಹಾಂತೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.