ಬೆಂಗಳೂರು: ನವೆಂಬರ್ ತಿಂಗಳವರೆಗೂ ಉಚಿತ ಪಡಿತರ ವಿತರಣೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅಗತ್ಯ ದಾಸ್ತಾನು ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ವರೆಗೂ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಉಚಿತ ಪಡಿತರ ವಿಸ್ತರಣೆಗೆ ಯಾವುದೇ ಸಮಸ್ಯೆ ಇಲ್ಲ. ಕಳೆದ ನಾಲ್ಕು ತಿಂಗಳುಗಳ ಕಾಲ ಯಾವ ರೀತಿ ಉಚಿತ ಪಡಿತರ ವಿರತಣೆ ಮಾಡಿದ್ದೇವೆಯೋ, ಅದೇ ರೀತಿ ಮುಂದಿನ ಐದು ತಿಂಗಳು ವಿತರಣೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತಮ ಬೆಳೆ ಬಂದಿದೆ, ರಾಜ್ಯದಲ್ಲಿ ಅಕ್ಕಿ, ಗೋದಿ, ರಾಗಿ, ಬೇಳೆ ದಾಸ್ತಾನು ಸಾಕಷ್ಟಿದೆ. ಕೇಂದ್ರದ ಆಹಾರ ಇಲಾಖೆ ಸಚಿವರ ಜೊತೆಯಲ್ಲಿಯೂ ನಾವು ನಿರಂತರ ಸಂಪರ್ಕದಲ್ಲಿ ಇರಲಿದ್ದೇವೆ ಎಂದರು.
ಉಚಿತ ಪಡಿತರ ವಿತರಣೆ ಯೋಜನೆಯಡಿ ಪಡಿತರ ವಿರತಣೆ ಮಾಡುತ್ತೇವೆ. ಯಾರೂ ಕೂಡ ಹಸಿವಿನಿಂದ ಇರಬಾರದು. ಆ ರೀತಿ ನಾವು ಪಡಿತರ ಕಾರ್ಡ್ ಇಲ್ಲದೇ ಇದ್ದರೂ ಕೂಡ ವಲಸೆ ಕಾರ್ಮಿಕರಿಗೂ ಪಡಿತರ ನೀಡಿದ್ದೇವೆ. ಮುಂದೆಯೂ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.