ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ನಡುವೆ ವಿಶ್ವ ದರ್ಜೆಯ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಸ್ಥಾಪಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಎಫ್‌ಕೆಸಿಸಿಐ ಅಭಿನಂದಿಸುತ್ತದೆ. ಇದು ನಿಜಕ್ಕೂ ಅತ್ಯಂತ ಶ್ಲಾಘನೀಯ ಕಾರ್ಯ. ಈ ಮೂಲಕ ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಎಂದು ಎಫ್‌ಕೆಸಿಸಿಐ (ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ) ತಿಳಿಸಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರಯೋಜನಕಾರಿಯಾಗಿದೆ. ನಮ್ಮ ರಾಜ್ಯದಲ್ಲಿ ಇಂತಹ ಇನ್ನೂ ಹಲವು ಎಕ್ಸ್‌ಪ್ರೆಸ್ ಹೆದ್ದಾರಿಗಳ ಅಗತ್ಯವಿದೆ. ತೀರಾ ಅಗತ್ಯವಾಗಿರುವ ಸರ್ವಿಸ್ ರಸ್ತೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸದೆ ಟೋಲ್ ಪಾವತಿ ಆರಂಭಿಸಿರುವುದು ಸೂಕ್ತವಲ್ಲ. ಬೆಂಗಳೂರು-ಮೈಸೂರು ನಡುವಿನ ಜಿಲ್ಲೆಗಳು ಮತ್ತು ಟೌನ್‌ಶಿಪ್‌ಗಳ ಮಾರ್ಗವನ್ನು ಸುಗಮಗೊಳಿಸಿದ ನಂತರವೇ ಟೋಲ್ ಶುಲ್ಕವನ್ನು ಸಂಗ್ರಹಿಸಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವಿನಂತಿಸಿದೆ.
ಎಕ್ಸ್‌ಪ್ರೆಸ್ ಹೆದ್ದಾರಿಯ ಸಂಪೂರ್ಣ ವಿಸ್ತರಣೆಗೆ ಟೋಲ್ ಸಂಗ್ರಹಿಸಲಾಗುತ್ತಿದ್ದು, ಪ್ರಯಾಣಿಸುವ ದೂರವನ್ನು ಅವಲಂಬಿಸಿ ಕಿಲೋಮೀಟರ್‌ಗೆ ಅನುಗುಣವಾಗಿ ಅನುಪಾತದ ಟೋಲ್ ಸಂಗ್ರಹಿಸುವುದು ಸೂಕ್ತ. ಸೇವಾ ರಸ್ತೆಗಳನ್ನು ಪೂರ್ಣಗೊಳಿಸದೆ ಟೋಲ್ ಪಾವತಿ ಆರಂಭಿಸುವುದರಿಂದ, ಪ್ರಸ್ತುತ ಕೈಗಾರಿಕಾ ವಲಯ, ಸಾರಿಗೆ ವಲಯ ಮತ್ತು ಸುತ್ತಮುತ್ತಲಿನ ಗ್ರಾಮಗಳು ತೊಂದರೆ ಎದುರಿಸುತ್ತಿವೆ. ಸಾಮಾನ್ಯ ಜನರೊಂದಿಗಿನ ವ್ಯವಹಾರ, ಕೈಗಾರಿಕೆ ಮತ್ತು ವ್ಯಾಪಾರ ವಲಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಬೆಲೆ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಎಫ್‌ಕೆಸಿಸಿಐ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಟೋಲ್ ಶುಲ್ಕ ವಿವರ: ಕಾರು/ಜೀಪು/ವ್ಯಾನ್ಗಳ ಏಕಮುಖ ಸಂಚಾರಕ್ಕೆ ರೂ. 135/- ಅದೇ ದಿನ ಮರು ಸಂಚಾರಕ್ಕೆ ರೂ. 205/- ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 4525/-, ಬಸ್ ಅಥವಾ ಟ್ರಕ್ ಏಕಮುಖ ಸಂಚಾರಕ್ಕೆ ರೂ. 460/- ಅದೇ ದಿನ ಮರು ಸಂಚಾರಕ್ಕೆ ರೂ. 690/- ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 15,325/-, ಲಘು ವಾಣಿಜ್ಯ ವಾಹನಗಳು, ಮೂರು ಅಕ್ಸೆಲ್ ವಾಣಿಜ್ಯ ವಾಹನಗಳು ಮತ್ತು ಭಾರಿ ನಿರ್ಮಾಣ ಯಂತ್ರಗಳಿಗೆ ವಿವಿಧ ದರಗಳನ್ನು ನಿಗದಿಪಡಿಸಲಾಗಿದೆ.
ಟೋಲ್ ಪ್ಲಾಜಾದಲ್ಲಿ ಎಲ್ಲಾ ರೀತಿಯ ವಾಹನಗಳು ಪ್ರಯಾಣದ 24 ತಾಸಿನೊಳಗಾಗಿ ಮರಳಿ ಬಂದಲ್ಲಿ ಶೇ.25 ರಷ್ಟು, ಎಲ್ಲಾ ವಿಭಾಗದ ವಾಹನಗಳ ಪಾವತಿ ದಿನಾಂಕದಿಂದ ಒಂದು ತಿಂಗಳೊಳಗಾಗಿ 50 ಬಾರಿ ಪ್ರಯಾಣಿಸಿದಲ್ಲಿ ಶೇ.33 ರಷ್ಟು, ಟೋಲ್ ಪ್ಲಾಜಾದಿಂದ 20 ಕಿ.ಮೀ ವಿಸ್ತೀರ್ಣದೊಳಗೆ ವಾಸಿಸುವ ಎಲ್ಲಾ ವಾಣಿಜ್ಯೇತರ ವಾಹನಗಳಿಗೆ ರೂ. 315/- ತಿಂಗಳ ಪಾಸ್ ಲಭ್ಯ ಹಾಗೂ ಟೋಲ್ ಪ್ಲಾಜಾ ಜಿಲ್ಲೆಯಲ್ಲಿ ನೋಂದಾಯಿತಗೊಂಡ ವಾಣಿಜ್ಯ ವಾಹನಗಳಿಗೆ ಶೇ.50 ರಷ್ಟು ರಿಯಾಯಿತಿ ದೊರೆಯಲಿದೆ.