ಬೆಂಗಳೂರು: ಬೈಂದೂರು ವಿಧಾನಸಭಾಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧಿತರಾದ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ಐದು ಮಂದಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣ ಪ್ರಮುಖ ಆರೋಪಿತೆಯಾಗಿರುವ ಚೈತ್ರಾ ಕುಂದಾಪುರ, ರಮೇಶ್, ದೇವರಾಜ್, ಶ್ರೀಕಾಂತ್, ಪ್ರಜ್ವಲ್ ಅವರನ್ನು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿ ಇಂದು ನಗರದ ಸಿಸಿಬಿ ಕಚೇರಿಗೆ ಅಧಿಕಾರಿಗಳು ಕರೆತಂದರು.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಿದರು. ಆರೋಪಿಗಳ ವಿರುದ್ಧ 5 ಕೋಟಿಗೂ ಹೆಚ್ಚು ಹಣ ವಂಚನೆ ಇದ್ದು, ಕೃತ್ಯ ಎಸಗಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಬಂಧಿತರಿಂದ ಹಣವನ್ನ ರಿಕವರಿ ಮಾಡಿಕೊಳ್ಳಬೇಕಿದೆ. ಈ ಸಂಬಂಧ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಬೇಕು ಎಂದು ಸಿಸಿಬಿ ಪರ ವಕೀಲರು ಮನವಿ ಮಾಡಿದರು. ಮನವಿಗೆ ಪುರಸ್ಕರಿಸಿದ ನ್ಯಾಯಾಲಯವು ಸೆ.23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿತು. ಪ್ರಕರಣದ ಮತ್ತೊಬ್ಬ ಆರೋಪಿತ ಗಗನ್ ಕಡೂರು ಎಂಬಾತನ್ನ ನಿನ್ನೆ ಬಂಧಿಸಿ ಈಗಾಗಲೇ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ಚುರುಕುಗೊಳಿಸಿದ ಸಿಸಿಬಿ: ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಾಮೀಲಾಗಿರುವ ಆರು ಮಂದಿ ಆರೋಪಿಗಳನ್ನ ಹೆಚ್ಚು ವಿಚಾರಣೆಗೊಳಪಡಿಸಲಾಗಿದೆ. ಗೋವಿಂದಬಾಬು ಪೂಜಾರಿ ಹೇಗೆ ಪರಿಚಯವಾಯಿತು ? ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಆಮಿಷವೊಡ್ಡಿ ಹೇಗೆ ವಂಚಿಸಲಾಯಿತು ಎಂಬುದರ ಬಗ್ಗೆ ಚೈತ್ರಾ ಕುಂದಾಪುರಗೆ ತನಿಖಾಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಸಹ ಆರೋಪಿಗಳಿಗೆ ದೊಡ್ಡಮಟ್ಟದಲ್ಲಿ ವಂಚನೆ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿರಲಿಲ್ಲ ಎಂಬುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಸ್ವಾಮೀಜಿ ಅಭಿನವ ಹಾಲಶ್ರೀಗಾಗಿ ಶೋಧ: ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಜಯನಗರದವ ಹಾಲಶ್ರೀ ಮಠದ ಅಭಿನವ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಅಜ್ಞಾತ ವಾಸದಲ್ಲಿದ್ದಾರೆ. ಪತ್ತೆಗಾಗಿ ಸಿಸಿಬಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ. ವಿಚಾರಣೆ ಮುಕ್ತಾಯದ ಬಳಿಕ ಡೈರಿ ವೃತ್ತದಲ್ಲಿರುವ ಮಹಿಳಾ ಸ್ವಾಂತನ ಕೇಂದ್ರಕ್ಕೆ ಚೈತ್ರಾಳನ್ನ ಬಿಡಲಾಗಿದ್ದು, ನಾಳೆ ಮತ್ತೆ ಸಿಸಿಬಿ ಕಚೇರಿಗೆ ಕರೆತಂದು ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಸೇರಿ 6 ಆರೋಪಿಗಳ ಬಂಧನ