ಬೆಂಗಳೂರು: ಪೊಲೀಸ್ ಪೇದೆ, ಬ್ಲಡ್ ಕ್ಯಾನ್ಸರ್ ರೋಗಿ ಸೇರಿದಂತೆ ಐವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಪಾದರಾಯನಪುರದಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸಿದ್ದಾಗ ಕೊರೊನಾ ಪಾಸಿಟಿವ್ ಕಂಡುಬಂದಿದ್ದ ರೋಗಿ 706 ರ ಸಂಪರ್ಕದಿಂದ ಇಂದು ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಕ್ವಾರಂಟೈನ್ನಲ್ಲಿದ್ದ, 42 ವರ್ಷ P-1668 ಪುರುಷ ಹಾಗೂ 52 ವರ್ಷದ P-1669 ಗೆ ಕೊರೊನಾ ವಕ್ಕರಿಸಿದೆ. ಇವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪ್ರೇಜರ್ ಟೌನ್ ಠಾಣೆಯಲ್ಲಿ ಟ್ರಾಫಿಕ್ ಪೇದೆಯಾಗಿ ಕೆಲಸ ಮಾಡುತ್ತಿದ್ದ P-1692 ಗೂ ಕೊರೊನಾ ಬಂದಿದ್ದು, ಯಲಹಂಕ ಕ್ವಾಟ್ರಸ್ಅನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ಮಾಡಲಾಗಿದೆ. ಈತನ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.
36 ವರ್ಷದ ಮಹಿಳೆ P-1659 ಮೂಲತಃ ರಾಮನಗರದವರು. ಲಕ್ಕಸಂದ್ರದ ತಂಗಿಮನೆಯಲ್ಲಿ ತನ್ನ ಪತಿಯ ಜೊತೆ ಇದ್ದುಕೊಂಡು, ಹೆಚ್ ಸಿ ಜಿ ಆಸ್ಪತ್ರೆಯಲ್ಲಿ ಬ್ಲಡ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ತಂಗಿ ಕುಟುಂಬ ಕೊಳ್ಳೇಗಾಲಕ್ಕೆ ಹೋಗಿತ್ತು. ಈಕೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಹೆಚ್ ಸಿಜಿಯಲ್ಲಿ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಪ್ರಥಮ ಸಂಪರ್ಕದಲ್ಲಿದ್ದ ಗಂಡನನ್ನ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಆಸ್ಪತ್ರೆಯನ್ನು ನೈರ್ಮಲ್ಯೀಕರಣ ಮಾಡಲಾಗಿದೆ. ವೈದ್ಯರು ಪಿಪಿಇ ಕಿಟ್ ಧರಿಸಿದ್ದರಿಂದ ಯಾರನ್ನೂ ಕ್ವಾರಂಟೈನ್ ಮಾಡುವ ಅಗತ್ಯ ಇಲ್ಲ ಎಂದು ಮೆಡಿಕಲ್ ಹೆಲ್ತ್ ಆಫೀಸರ್ ಡಾ. ಶಿವಕುಮಾರ್ ತಿಳಿಸಿದ್ದಾರೆ.
42 ವರ್ಷದ ಮಹಿಳೆ P-1695 ಆಸ್ಟಿನ್ ಟೌನ್ ನಿವಾಸಿಯಾಗಿದ್ದು, ಉಸಿರಾಟದ ತೊಂದರೆ ಹಾಗೂ ಜ್ವರದಿಂದಾಗಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಪತ್ತೆಯಾಗಿದೆ.