ಬೆಂಗಳೂರು : ದುಬೈನಿಂದ ಕಡಿಮೆ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ಬಳಿಕ ಆತನಿಗೆ ಮಚ್ಚಿನಿಂದ ಹಲ್ಲೆ ಮಾಡಿ 80 ಲಕ್ಷ ಸುಲಿಗೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ನ ರಾಬರ್ಟ್ಸನ್ ಪೇಟೆಯ ಸಂಕೇತ್ ಜೈನ್ ಎಂಬುವವರೇ ಹಣ ಕಳೆದುಕೊಂಡವರು. ಸಂಕೇತ್ ಜೈನ್ ನೀಡಿದ ದೂರಿನ ಮೇರೆಗೆ ಮೊಹಮ್ಮದ್ ರಿಜ್ವಾನ್, ಇರ್ಫಾನ್, ಸತೀಶ್, ದಿವಾಕರ್, ಆಶ್ರಫ್ ಎಂಬುವರನ್ನ ಬಂಧಿಸಲಾಗಿದೆ. ಬಂಧಿತರಿಂದ 55 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.
ಸಂಕೇತ್ ತಂದೆ ಕೆಜಿಎಫ್‌ನಲ್ಲಿ ಕಳೆದ 25 ವರ್ಷಗಳಿಂದ ಚಿನ್ನ- ಬೆಳ್ಳಿ ಪಾಲಿಶ್ (ಪಾನ್ ಬ್ರೋಕರ್) ಅಂಗಡಿ ಇಟ್ಟುಕೊಂಡಿದ್ದರು. ಹೀಗಾಗಿ ಚಿನ್ನ ವ್ಯಾಪಾರದ ಬಗ್ಗೆ ಸಂಕೇತ್ ಜ್ಞಾನ ಹೊಂದಿದ್ದ. ಜೊತೆಗೆ ಬೆಂಗಳೂರಿನಲ್ಲಿರುವ ಅಕ್ಕನ ಮನೆಗೆ ಹೋಗಿ ಬರುತ್ತಿದ್ದ. ಈ ವೇಳೆ, ಕರೀಂಖಾನ್ ಎಂಬುವರ ಪರಿಚಯವಾಗಿತ್ತು. ಈ ವೇಳೆ, ಸಂಕೇತ್ನ ವೃತ್ತಿ ಬಗ್ಗೆ ತಿಳಿದುಕೊಂಡ ಕರೀಂ ಖಾನ್, ನನ್ನ ಅಳಿಯ ದುಬೈನಿಂದ ಕಡಿಮೆ ಬೆಲೆಗೆ ಚಿನ್ನ ತಂದು ಮಾರಾಟ ಮಾಡುತ್ತಾನೆ. ನಿನಗೆ ಬೇಕಾದರೆ ಖರೀದಿಸಿ ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಎಂದಿದ್ದ. ಆರಂಭದಲ್ಲಿ ಸಂಕೇತ್ ಇದನ್ನು ಲಘುವಾಗಿ ಪರಿಗಣಿಸಿದ್ದ. ಕೆಲ ತಿಂಗಳ ಬಳಿಕ ಅಕ್ಕನ ಮದುವೆಗೆ ಹಣದ ಕೊರತೆ ಎದುರಾಗಿತ್ತು.
ಈ ವೇಳೆ ಕರೀಂಖಾನ್ ಹೇಳಿದ ಮಾತನ್ನು ನೆನಪಿಸಿಕೊಂಡು ಆತನ ಮೂಲಕ ಆರೋಪಿ ಮೊಹಮ್ಮದ್ ರಿಜ್ವಾನ್ ಎಂಬಾತನನ್ನು ಸಂಪರ್ಕಿಸಿದ್ದನು. ಶಂಕರಮಠದಲ್ಲಿ ಜಿಮ್ವೊಂದರ ಮಾಲೀಕನಾಗಿರುವ ರಿಜ್ವಾನ್, ಸಂಬಂಧಿಕರೊಬ್ಬರು ದುಬೈನಲ್ಲಿದ್ದು, ಅವರ ಮೂಲಕ ಒಂದೂವರೆ ಕೆ.ಜಿ ಚಿನ್ನ ನೀಡುತ್ತೇನೆ. ಇದಕ್ಕೆ 1 ಕೋಟಿ ರೂ. ಆಗಲಿದ್ದು ಹಣ ತರುವಂತೆ ರಿಜ್ವಾನ್ ಹೇಳಿದ್ದ. ಇದರಂತೆ ಮನೆಯಲ್ಲಿದ್ದ ದುಡ್ಡು ಸೇರಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಸಾಲ ಪಡೆದು 80 ಲಕ್ಷ ಹಣ ಒಗ್ಗೂಡಿಸಿ ಆರೋಪಿ ಸೂಚಿಸಿದ ಸ್ಥಳಕ್ಕೆ ಸಂಕೇತ್ ತೆರಳಿದ್ದ.
ಈ ವೇಳೆ ಸಂಕೇತ್ ರಿಜ್ವಾನ್ನನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಹೋಗುವಾಗ ನಿರ್ಜನ ಪ್ರದೇಶದಲ್ಲಿ ಪೂರ್ವಯೋಜಿತ ಸಂಚಿನಂತೆ ನಾಲ್ವರ ಗ್ಯಾಂಗ್ ಕಾರನ್ನು ಅಡ್ಡಗಟ್ಟಿ ಮಚ್ಚಿನಿಂದ ಸಂಕೇತ್ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ಸಂಕೇತ್ ಬಳಿಯಿದ್ದ 80 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಹಾಡಹಗಲೇ ಪಿಜಿಗಳಿಗೆ ನುಗ್ಗಿ ಲ್ಯಾಪ್ಟಾಪ್ ಕದಿಯುತ್ತಿದ್ದ ಮೂವರ ಬಂಧನ: 50ಕ್ಕೂ ಹೆಚ್ಚು ಲ್ಯಾಪ್ಟಾಪ್ ವಶ