ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಶಕ್ತಿ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಯೋಜನೆ ಸಂಬಂಧ ಸರ್ಕಾರ ಮೊದಲ ಕಂತಿನ ಪೈಕಿ 125.48 ಕೋಟಿ ರೂ. ಸಹಾಯಾನುದಾನ ಬಿಡುಗಡೆ ಮಾಡಿದೆ. ಮೊದಲ ಕಂತಿನ ಮೊತ್ತ 250.96 ಕೋಟಿ ರೂ. ಆಗಿದ್ದು, ಈ ಪೈಕಿ 125.48 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಶಕ್ತಿ ಯೋಜನೆ ಸಂಬಂಧ ರಾಜ್ಯ ಸರ್ಕಾರ ಮೊದಲ ಕಂತಿನ ಹಣ ಬಿಡುಗಡೆ ಮಾಡಿದೆ. ಆದರೆ, ಮೊದಲ ಕಂತಿನ ಸಂಪೂರ್ಣ ಹಣವನ್ನು ಬಿಡುಗಡೆ ಮಾಡದೇ ಇರುವುದು ರಸ್ತೆ ಸಾರಿಗೆ ನೌಕರರ ಆತಂಕಕ್ಕೆ ಕಾರಣವಾಗಿದೆ. ಜೂ. 11 ರಿಂದ ಶಕ್ತಿ ಯೋಜನೆ ಜಾರಿಯಾಗಿತ್ತು. ಜು. 30ರವರೆಗೆ ಶಕ್ತಿ ಯೋಜನೆಯ ವೆಚ್ಚ 687.49 ಕೋಟಿ ರೂ. ಆಗಿದೆ. ರಾಜ್ಯ ಸರ್ಕಾರ ಜೂ. 11ರಿಂದ ಜೂ.30ರವರೆಗೆ ಶಕ್ತಿ ಯೋಜನೆಯಡಿ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ 259.96 ಕೋಟಿ ರೂ. ವೆಚ್ಚವಾಗಿತ್ತು. ಈ ಹಣವನ್ನು ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಆದರೆ ರಾಜ್ಯ ಸರ್ಕಾರ ಒಟ್ಟು 125.48 ಕೋಟಿ ರೂ. ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದೆ.
ಯಾವ ನಿಗಮಗಳಿಗೆ ಎಷ್ಟು?: ಅದರಂತೆ ಕೆಎಸ್ಆರ್ಟಿಸಿಗೆ 47.15 ಕೋಟಿ ರೂ., ಬಿಎಂಟಿಸಿಗೆ 21.85 ಕೋಟಿ ರೂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 32.57 ಕೋಟಿ ರೂ. ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 23.90 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.
ಜೂ. 11ರಿಂದ ಜು.30ರವರೆಗೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಮೌಲ್ಯದ ಮೊತ್ತ 687,49,57,753 ರೂ.ಗಳಾಗಿದೆ. ಈ ಪೈಕಿ ಕೆಎಸ್‌ಆರ್‌ಟಿಸಿಯಲ್ಲಿ 260.26 ಕೋಟಿ ರೂ.ಗಳಾಗಿದೆ. ಬಿಎಂಟಿಸಿಯಲ್ಲಿ 122.85 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 172.98 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 131.38 ಕೋಟಿ ರೂ.
ಸಿಎಂ ಸಂತೃಪ್ತಿ: ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. "ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೇ ಸಮಾಜದ ಎಲ್ಲ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು" ಎಂದು ಹೇಳಿದ್ದರು.
ಇದನ್ನೂ ಓದಿ: Shakti Scheme: ಮಹಿಳೆಯರಿಗೆ ಟ್ಯಾಪ್ & ಟ್ರಾವೆಲ್ ಸ್ಮಾರ್ಟ್ ಕಾರ್ಡ್ ವಿತರಿಸಲು ಕೆಎಸ್ಆರ್ಟಿಸಿ ಚಿಂತನೆ