ಬೆಂಗಳೂರು: ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಗಿರಿನಗರ ಪೊಲೀಸರು ನಟೋರಿಯಸ್ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ರೌಡಿಶೀಟರ್ ವಿಜಯ್ ಕುಮಾರ್ ಕಾಲಿಗೆ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾನೆ.
ಕೊಲೆ, ಕೊಲೆ ಯತ್ನ, ಧಮಕಿ, ದರೋಡೆ ಸೇರಿ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಜಯ್ ಕುಮಾರ್ ಜೈಲು ಸೇರಿದ್ದ. ಕಳೆದ ಒಂದು ವಾರದ ಹಿಂದೆ ಜಾಮೀನು ಪಡೆದು ಹೊರಬಂದಿದ್ದ ಈತ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಗಿರಿನಗರದ ವೀರಭದ್ರೇಶ್ವರ ನಗರಕ್ಕೆ ಆರೋಪಿ ಬರುವ ಮುನ್ಸೂಚನೆ ಅರಿತ ಸಬ್ ಇನ್ಸ್ಪೆಕ್ಟರ್ ವಿನಯ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಬಂಧನ ವೇಳೆ ಆರೋಪಿಯು ಪೊಲೀಸ್ ಕಾನ್ಸ್ಟೇಬಲ್ ಮಧುಸೂದನ್ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶರಣಾಗುವಂತೆ ಎಚ್ಚರಿಸಿದರೂ ನಿರಾಕರಿಸಿದ ಹಿನ್ನೆಲೆ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.