ಬೆಂಗಳೂರು : ವೀರಭದ್ರನಗರದ ಗ್ಯಾರೇಜ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಎಆರ್ (ಫೈರ್ ಆಕ್ಸಿಡೆಂಟಲ್ ರಿಪೋರ್ಟ್) ದಾಖಲಾಗಿದೆ. ಅಗ್ನಿ ಅವಘಡ ಸಂಭವಿಸಿದ್ದು, ಹೇಗೆ? ಪರಿಣಾಮವೇನು ಎಂಬುದರ ಕುರಿತು ಎಫ್ಎಆರ್ ದಾಖಲಾಗಿದ್ದು ವಿಧಿ ವಿಜ್ಞಾನ ಪ್ರಯೋಗಾಲಯ, ಅಗ್ನಿಶಾಮಕ ಇಲಾಖೆ ಹಾಗೂ ಸಾರಿಗೆ ಇಲಾಖೆಗಳ ವರದಿ ಕೈ ಸೇರಿದ ಬಳಿಕ ಪೊಲೀಸರು ತನಿಖೆ ಆರಂಭಿಸಲಿದ್ದಾರೆ.
ಅವಘಡ ನಡೆದ ಸ್ಥಳದ ಪರಿಶೀಲನೆ ನಡೆಸಿರುವ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್) ಅಧಿಕಾರಿಗಳ ತಂಡ ಅವಶೇಷಗಳ ಸ್ಯಾಂಪಲ್ ಸಂಗ್ರಹಿಸಿದೆ. ಮತ್ತೊಂದೆಡೆ ಅಗ್ನಿ ಹೆಚ್ಚು ವ್ಯಾಪಿಸಲು ಹಾಗೂ ನಿಯಂತ್ರಣಕ್ಕೆ ಸಿಗದಿರಲು ಕಾರಣವೇನು ಎಂದು ಅಗ್ನಿಶಾಮಕದಳದ ಅಧಿಕಾರಿಗಳು ವರದಿ ನೀಡಲಿದ್ದಾರೆ. ಇದಲ್ಲದೇ ಸ್ಥಳದಲ್ಲಿದ್ದ ಬಸ್‌ಗಳ ಸ್ಥಿತಿಗತಿಯ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ವರದಿ ನೀಡಲಿದ್ದಾರೆ. ಮೂರೂ ಇಲಾಖೆಗಳ ವರದಿ ಕೈ ಸೇರಿದ ಬಳಿಕ ಪೊಲೀಸರು ಅಧಿಕೃತ ತನಿಖೆ ಆರಂಭಿಸಲಿದ್ದಾರೆ.
ಕಚೇರಿಯಲ್ಲಿಟ್ಟಿದ್ದ ಎಂಟು ಲಕ್ಷ ರೂ ಹಣ ಸಹ ಬೆಂಕಿಗಾಹುತಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಘಟನೆಯ ಬಳಿಕ ಲೋ ಬಿಪಿಯಿಂದ ಅಸ್ವಸ್ಥನಾಗಿರುವ ಗ್ಯಾರೇಜ್ ಮಾಲೀಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸ್ಚಾರ್ಜ್ ಬಳಿಕ ನೋಟಿಸ್ ನೀಡಲಿರುವ ಪೊಲೀಸರು ವಿವರಣೆ ಪಡೆದು, ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಿದ್ದಾರೆ.
ಗ್ಯಾರೇಜ್‌ನಲ್ಲಿ ಬೆಂಕಿ ಆಕಸ್ಮಿಕ..18 ಬಸ್‌ಗಳು ಬೆಂಕಿಗಾಹುತಿ : ಬೆಂಗಳೂರಿನ ವೀರಭದ್ರ ನಗರದ ಗ್ಯಾರೇಜ್‌ನಲ್ಲಿ ಸೋಮವಾರ ನಡೆದ ಅಗ್ನಿ ಅವಘಡದಲ್ಲಿ ಒಟ್ಟು 18 ಖಾಸಗಿ ಬಸ್‌ಗಳು ಸುಟ್ಟು ಕರಕಲಾಗಿದ್ದವು. ಎಸ್ವಿ ಕೋಚ್ ಗ್ಯಾರೇಜ್‌ನಲ್ಲಿ ಹೊಸ ಹಾಗೂ ಹಳೆಯ ಬಸ್ ಇಂಜಿನ್‌ಗಳಿಗೆ ಬಾಡಿ ಅಳವಡಿಸುವ ಕೆಲಸ ಮಾಡಲಾಗುತ್ತಿತ್ತು. ವೆಲ್ಡಿಂಗ್ ವೇಳೆ ಸಿಡಿದ ಕಿಡಿಯಿಂದಾಗಿ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ ಉಂಟಾಗಿದ್ದು, ಗ್ಯಾರೇಜ್ನಲ್ಲಿದ್ದ ಇತರ ಬಸ್‌ಗಳಿಗೆ ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಗ್ಯಾರೇಜ್‌ನಲ್ಲಿ ಖಾಸಗಿ ಬಸ್‌ಗಳು ಅಗ್ನಿಗಾಹುತಿಯಾಗಿದ್ದವು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು.
ಘಟನಾ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ್ದ ಡಿ ಕೆ ಶಿವಕುಮಾರ್ ''ವೇಲ್ಡಿಂಗ್ ಸಂದರ್ಭ ಉಂಟಾದ ಕಿಡಿಯಿಂದ ಒಂದು ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಅದು ಬೇರೆ ಬಸ್‌ಗಳಿಗೆ ವ್ಯಾಪಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಬೆಂಗಳೂರು: ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ, 18 ಬಸ್‌ಗಳು ಬೆಂಕಿಗೆ ಆಹುತಿ