ಬೆಂಗಳೂರು: ಮನೆ ಮನೆಗೆ ಪೋಸ್ಟ್ ಮೂಲಕ ಡಿಡಿ ತಲುಪಿಸುತ್ತಿದ್ದ ಆರೋಪದ ಮೇರೆಗೆ ಉದ್ಯಮಿ ಹಾಗೂ ರಾಜಕೀಯ ಮುಖಂಡ ಕೆಜಿಎಫ್ ಬಾಬು ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 1105 ರೂ. ನಂತೆ ಮೂರು ಸಾವಿರ ಮಂದಿಗೆ ಡಿಡಿ ಕೊಡಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಸಿದ್ದಾಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 30 ಲಕ್ಷ ರೂ. ಡಿಡಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದಾಪುರದ ಕೆಎಂ ಕಾಲೋನಿಯಲ್ಲಿ ಭಾನುವಾರ ಮಧ್ಯಾಹ್ನ ಡಿಡಿ ಹಂಚುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಡಿಡಿಗಳನ್ನು ವಶಪಡಿಸಿಕೊಂಡು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಕೆಜಿಎಫ್ ಬಾಬು ನಿವಾಸಕ್ಕೆ ಸಿಎಂ ಇಬ್ರಾಹಿಂ ಭೇಟಿ.. ಜೆಡಿಎಸ್ ಸೇರುವ ಬಗ್ಗೆ ಸಮಾಲೋಚನೆ
ದೂರು - ಪ್ರತಿದೂರು ದಾಖಲು: ಇತ್ತಿಚೇಗೆ ಕೆಜಿಎಫ್ ಬಾಬು ಅವರ ಸಹೋದರಿ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಸಂಪಂಗಿರಾಮನಗರ ಕೆ.ಎಸ್.ಗಾರ್ಡನ್ನಲ್ಲಿರುವ ಕೆಜಿಎಫ್ ಬಾಬು ಅವರ ಸಹೋದರಿ ಶಾಹೀನ್ ತಾಜ್ ವಾಸವಿದ್ದ ಮನೆಯ ಮುಂದೆ ಚಪ್ಪಲಿ ಸ್ಟ್ಯಾಂಡ್ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಮನೆಯ ಒಳಭಾಗಕ್ಕೂ ಬೆಂಕಿ ಆವರಿಸಿತ್ತು.
ಆರ್.ವಿ.ಯುವರಾಜ್ ವಿರುದ್ಧ ದೂರು: ಘಟನೆ ಬಳಿಕ ಕಾಂಗ್ರೆಸ್ನ ಯುವ ನಾಯಕ ಆರ್.ವಿ ಯುವರಾಜ್ ಕಡೆಯವರ ವಿರುದ್ಧ ಆರೋಪ ಕೇಳಿ ಬಂದಿದ್ದವು. ತಡರಾತ್ರಿ ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್ ಕಡೆಯ ಎಂಟರಿಂದ ಹತ್ತು ಜನ ಬಂದು ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾರೆ ಎಂದು ಕೆಜಿಎಫ್ ಬಾಬು ಸಹೋದರಿ ಶಾಹೀನ್ ತಾಜ್ ಸಂಪಂಗಿ ರಾಮನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರ್.ವಿ ಯುವರಾಜ್ ಪ್ರತಿದೂರು: ಯುವರಾಜ್ ಮೇಲೆ ದೂರು ದಾಖಲಾದಕ್ಷಣ ಪೊಲೀಸ್ ಠಾಣೆಗೆ ತೆರಳಿ ಪ್ರತಿದೂರು ಸಲ್ಲಿಸಿದ್ದರು. ಕೆಜಿಎಫ್ ಬಾಬು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದುವರೆಗೆ ನಮ್ಮ ತಂದೆಯವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುತ್ತಿದ್ದ ಕೆಜಿಎಫ್ ಬಾಬು, ನಮ್ಮ ತಂದೆ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದ ಬಳಿಕ ನನ್ನ ಮೇಲೆ ಆರೋಪಗಳನ್ನ ಮಾಡಿದ್ದಾರೆ. ನನ್ನ ತೇಜೋವಧೆ ಮಾಡಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದು, ಬೇಕಿದ್ದರೆ ಟವರ್ ಡಂಪ್ ಲೋಕೆಷನ್ ಪತ್ತೆಹಚ್ಚಿ ತನಿಖೆ ನಡೆಸಲಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಕಾಂಗ್ರೆಸ್ ಪಕ್ಷದಿಂದ ಅಮಾನತು: ಜನವರಿ ಮೊದಲನೇ ವಾರದಲ್ಲಿ ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನುತುಗೊಳಿಸಿ ಕೆಪಿಸಿಸಿ ಶಿಸ್ತು ಕ್ರಿಯಾ ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್ ಆದೇಶಿಸಿದ್ದರು. ಕಾಂಗ್ರೆಸ್ ಪಕ್ಷದ ಶಿಸ್ತು ಪಾಲನಾ ಸಮಿತಿಯಿಂದ ತಮಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕೆಲ ತಿಂಗಳ ಹಿಂದೆಯೇ ತಾವು ಪಕ್ಷದ ನೀತಿಯ ವಿರುದ್ಧವಾಗಿ ಮಾಧ್ಯಮದವರಿಗೆ ವಿವಿಧ ರೀತಿಯ ಹೇಳಿಕೆ ನೀಡುವ ಬಗ್ಗೆ ನೋಟಿಸ್ ನೀಡಲಾಗಿದೆ.
ನೀವು ಶಿಸ್ತು ಸಮಿತಿಯ ಕಾರಣ ಕೇಳಿ ನೋಟಿಸ್‌ಗೆ ಸಮಂಜಸ ಉತ್ತರ ನೀಡಿರುವುದಿಲ್ಲ. ಇಂದು (ಶುಕ್ರವಾರ) ಕೂಡ ಸ್ವಯಂ ಪ್ರೇರಿತರಾಗಿ ನೀವು ಪಕ್ಷದ ಕಚೇರಿಯಲ್ಲಿ, ಅಧ್ಯಕ್ಷರ ಪೂರ್ವಾನುಮತಿ ಇಲ್ಲದೇ, ಪಕ್ಷವನ್ನು ಉದ್ದೇಶಿಸಿ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದೀರಿ. ನಿಮ್ಮ ಈ ನಡೆಯು ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದೆ. ಹಾಗೂ ಹಿನ್ನಡೆಗೂ ಕಾರಣವಾಗುತ್ತಿದೆ ಎಂದು ಗಂಭೀರವಾಗಿ ಪರಿಗಣಿಸಿ, ಈ ಕೂಡಲೇ ನಿಮ್ಮನ್ನು ಪಕ್ಷದಿಂದ ಅಮಾನತು ಗೊಳಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿತ್ತು..