ಬೆಂಗಳೂರು : ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್- ಬಿಜೆಪಿ ಮಧ್ಯೆ ನೇರಾ ಹಣಾಹಣಿ ಇದ್ದರೆ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಲೆಕ್ಕಾಚಾರವೇ ಬೇರೆ. ಬೆಳಗಾವಿ ಹಾಗೂ ಮಸ್ಕಿ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿದಿಲ್ಲ. ಇದರ ಲಾಭ ಹೆಚ್ಚು ಬಿಜೆಪಿಗೆ.
ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 17 ರಂದು ಉಪಚುನಾವಣೆ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅನುಕಂಪ, ಜಾತಿ ಸಮೀಕರಣ ಹಾಗೂ ಭಾಷಾಭಿಮಾನ ಮುನ್ನೆಲೆಗೆ ಬಂದಿದೆ. ಬಿಜೆಪಿ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರು ಕಣದಲ್ಲಿದ್ದು, ಅನುಕಂಪದ ಲಾಭದ ನಿರೀಕ್ಷೆಯ ಜೊತೆಗೆ ಲಿಂಗಾಯತ ಮತ್ತು ಮರಾಠಿ ಮತಗಳನ್ನು ಗಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ಅದರ ಜೊತೆಗೆ ಪರಿಶಿಷ್ಟ ಸಮುದಾಯ ಹಾಗೂ ಹಿಂದುಳಿದ ಮತಗಳನ್ನು ಸೆಳೆಯಲು ಕಸರತ್ತು ನಡೆದಿದೆ. ಜೆಡಿಎಸ್ ಮತಗಳು ತಮಗೆ ಬರಲಿವೆ ಎಂಬ ಆತ್ಮ ವಿಶ್ವಾಸದಲ್ಲಿ ಬಿಜೆಪಿ ಇದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ತಮ್ಮ ವೈಯಕ್ತಿಕ ರಾಜಕೀಯ ತಂತ್ರಗಾರಿಕೆ ಮೂಲಕ ಬಿಜೆಪಿ ಬೆನ್ನಿಗೆ ನಿಂತಿರುವ ಮರಾಠಿ, ಲಿಂಗಾಯತ, ಅಲ್ಪಸಂಖ್ಯಾತ ಸಮುದಾಯ ಮತಗಳನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ತನ್ನದೇ ಆದ ತಂತ್ರಗಾರಿಕೆ ಮೂಲಕ ಜೆಡಿಎಸ್ ಮತಗಳನ್ನು ಸೆಳೆಯಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನೇರಾ ಹಣಾಹಣಿ ಇದೆ.
ಮಸ್ಕಿ : ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ಇಲ್ಲೂ ಸಹ ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲದ ಕಾರಣ, ಬಿಜೆಪಿ - ಕಾಂಗ್ರೆಸ್ ಸಮಬಲವಿದೆ. ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಇತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಂದು ಹೋದ ನಂತರ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಸಿಎಂ ಪುತ್ರ ವಿಜಯೇಂದ್ರ, ಈ ಕ್ಷೇತ್ರದಲ್ಲಿ ತಮ್ಮದೇ ಆದ ತಂತ್ರಗಾರಿಕೆ ನಡೆಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ್ ಕೂಡ ಪ್ರಬಲರಾಗಿದ್ದು, ಪ್ರತಿ ತಂತ್ರ ಹೆಣೆದಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸದಿರುವುದು ಕಾಂಗ್ರೆಸ್ ಗೆ ಪ್ಲಸ್ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಬಸವಕಲ್ಯಾಣ : ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಒಂದೊಂದು ಮತದ ಹಿಂದೆಯೂ ವಿವಿಧ ಪಕ್ಷಗಳ ಮುಖಂಡರು ಜಾತಿಯನ್ನೇ ಪ್ರಬಲ ಅಸ್ತ್ರವಾಗಿ ಬಳಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ ನಾರಾಯಣ ರಾವ್ ಮಧ್ಯೆ ನೇರ ಹಣಾಹಣಿ ಇರುವುದು ಮೇಲ್ನೋಟಕ್ಕೆ ಕಂಡು ಬಂದರೂ, ಪಕ್ಷೇತರರಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಓಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಪ್ರಬಲ ಪೈಪೋಟಿ ನೀಡಿರುವುದು ಕಾಂಗ್ರೆಸ್ಗೆ ತಲೆ ನೋವಾಗಿದೆ.
ಈ ಕ್ಷೇತ್ರದಲ್ಲಿ ಮತ ವಿಭಜನೆ ಆಗುವ ಸಾಧ್ಯತೆ ಹೆಚ್ಚಿದೆ. ಬಿಜೆಪಿಯ ಶರಣು ಸಲಗರ್ ಲಿಂಗಾಯಿತರು, ಇದೇ ಸಮಾಜಕ್ಕೆ ಸೇರಿದ ಮಲ್ಲಿಕಾರ್ಜುನ ಖೂಬಾ ಸ್ಪರ್ಧೆ ಬಿಜೆಪಿ ನಾಯಕರಿಗೆ ಗೊಂದಲ ತರಿಸಿದೆ. ಮಲ್ಲಿಕಾರ್ಜುನ ಖೂಬಾ ಮರಾಠ ಮತಗಳನ್ನು ಸೆಳೆದರೆ ಬಿಜೆಪಿಗೆ ನಷ್ಟವಾಗಲಿದೆ. ಜೆಡಿಎಸ್ ಅಭ್ಯರ್ಥಿ ವಿಶೇಷವಾಗಿ ಅಲ್ಪಸಂಖ್ಯಾತ ಮತಗಳು ಹಾಗೂ ಅಹಿಂದ ಮತಕ್ಕೆ ಕೈ ಹಾಕಿದರೆ ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆ. ಕಾಂಗ್ರೆಸ್ ಅಭ್ಯರ್ಥಿ ಮಾಲಾ ಅವರು ಪತಿ ನಾರಾಯಣ ರಾವ್ ಸಾವಿನ ಅನುಕಂಪದ ಜೊತೆಗೆ ಅಹಿಂದ ಮತಗಳನ್ನು ನಂಬಿದ್ದಾರೆ. ಈ ಕ್ಷೇತ್ರದ ಒಟ್ಟಾರೆ ಚಿತ್ರಣವನ್ನು ನೋಡಿದರೆ ಮತ ವಿಭಜನೆ ಆಗುವುದು ನಿಶ್ಚಿತ ಎನ್ನಲಾಗಿದೆ. ಒಂದೊಂದು ಕ್ಷೇತ್ರದಲ್ಲೂ ಒಂದೊಂದು ಲೆಕ್ಕಾಚಾರ ಸ್ಥಳೀಯ ಮಟ್ಟದಲ್ಲಿ ಇದೆ. ಇದಕ್ಕೆಲ್ಲಾ ಮೇ 2 ರಂದು ನಡೆಯುವ ಚುನಾವಣಾ ಫಲಿತಾಂಶದಲ್ಲಿ ಉತ್ತರ ಸಿಗಲಿದೆ.
ಚುನಾವಣಾ ಪ್ರಚಾರದಲ್ಲಿ ಎದ್ದು ಕಾಣುವ ದೇವೇಗೌಡರ ಗೈರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು ಹೋಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಕೊನೆಗಳಿಗೆಯಲ್ಲಿ ಸಾಧ್ಯವಾಗಲಿಲ್ಲ. ಕಾರಣ, ದೇವೇಗೌಡರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಇದೀಗ ಗುಣಮುಖರಾಗಿರುವ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇಳಿ ವಯಸ್ಸಿನಲ್ಲೂ ತಮ್ಮ ಪಕ್ಷ ಬೆಳೆಸುವಲ್ಲಿ ಟೊಂಕಕಟ್ಟಿ ನಿಲ್ಲುವ ದೇವೇಗೌಡರು, ಈ ಬಾರಿ ಉಪಚುನಾವಣೆಯ ಪ್ರಚಾರಕ್ಕೆ ಹೋಗದಿರುವುದು ಜೆಡಿಎಸ್ ಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ ಅಂತಲೇ ಹೇಳಬಹುದು. ಆದರೂ, ಇದನ್ನು ಸರಿದೂಗಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತಮ್ಮ ಪಕ್ಷದ ಅಭ್ಯರ್ಥಿ ಪರ ಅಬ್ಬರದ ಪ್ರಚಾರವನ್ನೇ ಮಾಡಿದ್ದಾರೆ.