ಬೆಂಗಳೂರು: ''ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಸಾಕಷ್ಟು ದೊಡ್ಡ ಮಟ್ಟದ ಪೈಪೋಟಿ ನಡೆಯುತ್ತಿದೆ. ನಾನು ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಾಧ್ಯವಾದಷ್ಟು ಸಂಧಾನ ಸಭೆ ಮಾಡುತ್ತಿದ್ದೇವೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ನಮ್ಮಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಟಿಕೆಟ್ ಯಾರಿಗೆ ಕೊಡಬೇಕು ಎಂದು ಪಕ್ಷ ತೀರ್ಮಾನ ಮಾಡುತ್ತದೆ. ಯಾವ ಗಲಾಟೆಗೂ ಅವಕಾಶವಿಲ್ಲ, ಹೇಗೆ ನಿಭಾಯಿಸಬೇಕು ಎಂಬುದು ಗೊತ್ತಿದೆ. ಮಾ.7, 8ಕ್ಕೆ ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಒಗ್ಗಟಾಗಿ ಎಲೆಕ್ಷನ್ ಮಾಡ್ತೇವೆ'' ಎಂದರು.
''ಪಕ್ಷದಲ್ಲಿ ಶಿಸ್ತು ಮುಖ್ಯ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅಧಿಕಾರಕ್ಕೆ ಬಂದರೆ 20 ಎಂಎಲ್ಸಿ ಮಾಡುವ ಅವಕಾಶವಿದೆ, ಬೋರ್ಡ್ ಚೇರ್ಮನ್ ಮಾಡುವ ಅವಕಾಶವೂ ಇದೆ. ಸಂಧಾನ ಸಭೆ ಮಾಡ್ತಾ ಇದ್ದೇವೆ. ನಾನು ಹಾಗೂ ಸಿದ್ದರಾಮಯ್ಯ ಸಂಧಾನ ಸಭೆ ಮಾಡ್ತಾ ಇದ್ದೇವೆ. ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಡಿಕೆಶಿ ಅಸಮಾಧಾನ: ''ಸರ್ಕಾರ ಏನೇ ಗ್ಯಾರಂಟಿ ಕೊಡಲಿ, ನಮ್ಮ ಗ್ಯಾರಂಟಿ ಕೊಡ್ತಾ ಇದ್ದೇವೆ. ಸರ್ಕಾರಿ ನೌಕರರ ಪರವಾಗಿ ನಾವು ನಿಂತಿದ್ದೇವೆ. ನಾವು ಭರವಸೆ ಕೊಟ್ಟ ಮೇಲೆ ಸರ್ಕಾರದ ಮಧ್ಯಂತರ ಪರಿಹಾರ ಘೋಷಣೆ ಮಾಡಿದ್ದಾರೆ. ಓಪಿಸಿ, ಎನ್ಪಿಎಸ್ ವಿಚಾರ ಚರ್ಚೆ ಮಾಡಿದ್ದೇವೆ. ಗ್ಯಾಸ್ ಬೆಲೆ ಏರಿಕೆಯಾಗಿದೆ. ನೆರೆ ಬಂದಾಗ, ಸಾವುಗಳು ಜರುಗಿದಾಗ ಮೋದಿ, ಶಾ ಬರಲಿಲ್ಲ. ಎಲೆಕ್ಷನ್ಗಾಗಿ ವೋಟಿನ ಭೇಟೆ ಮಾಡ್ತಾ ಇದ್ದಾರೆ. ಆದರೆ, ಜನ ತೀರ್ಮಾನ ಮಾಡಿದ್ದಾರೆ ಭ್ರಷ್ಟಾಚಾರ ಆಡಳಿತ ತೆಗೆಯಬೇಕು ಎಂದು ತೀರ್ಮಾನ ಮಾಡಿದ್ದಾರೆ. ಭ್ರಷ್ಟ ರಹಿತ ಸರ್ಕಾರ ಕೊಡ್ತೇವೆ ಎಂದು ಮೋದಿ ಹೇಳಿದ್ದಾರೆ. ಮೊದಲು ಇಲ್ಲಿರುವ ಭ್ರಷ್ಟ ಸರ್ಕಾರಕ್ಕೆ ಶಿಕ್ಷೆ ಕೊಡಲಿ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೇತ್ರಕ್ಕೆ ಒಂದೇ ಟಿಕೆಟ್ ಕೊಡಲು ಸಾಧ್ಯ: ''500 ಕೊಟ್ಟು ಜನರನ್ನ ಕರೆಸಬೇಕು ಎಂಬ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರ ಸುಳ್ಳು, ಆ ಪದ್ದತಿ ನಮಗೆ ಬೇಕಿಲ್ಲ'' ಎಂದ ಅವರು, ಬೆಳಗಾವಿಯಲ್ಲಿ ಸಿದ್ದರಾಮಯ್ಯಗೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದ ವಿಚಾರವಾಗಿ ಮಾತನಾಡಿ, ''ಎಲ್ಲಾ ಕಡೆ ಆಕಾಂಕ್ಷಿಗಳು ಇದ್ದಾರೆ. 1300ಕ್ಕೂ ಹೆಚ್ಚು ಜನ ಅರ್ಜಿ ಹಾಕಿದ್ದಾರೆ. ಹಾಗಾಗಿ ಟಿಕೆಟ್ ಕೇಳ್ತಾರೆ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಟಿಕೆಟ್ ಯಾರಿಗೆ ಕೊಡಬೇಕು ಎಂದು ಪಾರ್ಟಿ ತೀರ್ಮಾನ ಮಾಡುತ್ತದೆ. ನಾವು ಈಗಾಗಾಲೇ ತೀರ್ಮಾನ ಮಾಡಿದ್ದೇವೆ. ಒಂದು ಕ್ಷೇತ್ರಕ್ಕೆ ಎರಡು ಮೂರು ಟಿಕೆಟ್ ಕೊಡಲು ಸಾಧ್ಯವಿಲ್ಲ, ಒಂದೇ ಟಿಕೆಟ್ ಕೊಡಲು ಸಾಧ್ಯ. ಯಾರು ಬಹಳ ಪ್ರಬಲ ಆಕಾಂಕ್ಷಿಗಳಿದ್ದಾರೆ, ಗೆಲ್ಲುವಂತ ಆಕಾಂಕ್ಷಿಗಳಿದ್ದಾರೆ ಅವರಿಗೆ ಅವಕಾಶ ಸಿಗದೇ ಇದ್ದರೆ ಬೇರೆ ವ್ಯವಸ್ಥೆ ಮಾಡುತ್ತೇವೆ'' ಎಂದು ಡಿಕೆಶಿ ಭರವಸೆ ನೀಡಿದರು.
ವೋಟಿಗಾಗಿ ಮೋದಿ ಭೇಟಿ: ''ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಹೋದರೆ ಒಳ್ಳೆ ರಿಸಲ್ಟ್ ಬರುತ್ತೆ ಅನ್ನೋದು ಗೊತ್ತಿದೆ. ನಮ್ಮ ಪ್ರಜಾಧ್ವನಿ ಯಾತ್ರೆಯನ್ನು ಕೂಡ ಗಮನಿಸಿದ್ದೀರಿ. ನಡ್ಡಾ ಅವರ ಯಾತ್ರೆ ಹೇಗಿತ್ತು ಅನ್ನೋದನ್ನ ಕೂಡ ಗಮನಿಸಿದ್ದೀರಿ. ಸರ್ಕಾರದವರು ಏನೇ ಗ್ಯಾರಂಟಿ ಕೊಡಲಿ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳ್ತಿದ್ದೇನೆ, 7ನೇ ವೇತನ ಆಯೋಗವನ್ನು ನಾವು ಜಾರಿಗೊಳಿಸುತ್ತೇವೆ ಅಂತ ಹೇಳಿದ್ವಿ. ಅದನ್ನು ನೋಡಿ ಬಿಜೆಪಿಯವರು ಮಧ್ಯಂತರ ಪರಿಹಾರ ನೀಡಿದ್ದಾರೆ. ಮೊದಲು ಆಗಲ್ಲ ಅಂತ ಹೇಳುತ್ತಿದ್ದರು. ನಾವು ನೌಕರರ ಜೊತೆ ನಿಲ್ಲುತ್ತೇವೆ ಅಂದಾಗ ಈಗ ಆದೇಶ ಹೊರಡಿಸಿದ್ದಾರೆ. ಮೋದಿಯವರು ಎಲೆಕ್ಷನ್ ಟೈಮಿಗೆ ಬರುತ್ತಾರೆ. ಇದು ವೋಟಿಗಾಗಿ ಭೇಟಿ ಅಷ್ಟೇ. ಭ್ರಷ್ಟ ಆಡಳಿತವನ್ನು ತೆಗೆಯಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ '' ಎಂದು ಕಿಡಿ ಕಾರಿದರು.
ಇದನ್ನೂ ಓದಿ: ಹಾಸ್ಯನಟ ಸಾಧುಕೋಕಿಲಗೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಸ್ಥಾನ