ಬೆಂಗಳೂರು: ಗಡಿ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೋವಿಡ್ ಹಬ್ಬಿದ್ದು, ನಿತ್ಯ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬರುತ್ತಿವೆ. ಆ ರಾಜ್ಯಗಳಿಂದ ಬರುವವರಿಗೆ ರಾಜ್ಯದಲ್ಲಿ ಕೆಲವು ನಿಬಂಧನೆ ವಿಧಿಸಲಾಗಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದರು.
ಇಂದು ಎರಡನೇ ಹಂತದ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ, ಮೂರನೇ ಹಂತದ ವ್ಯಾಕ್ಸಿನೇಷನ್ಗೆ ಸಿದ್ಧತೆ ಕುರಿತಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಆಯುಕ್ತ ಮಂಜುನಾಥ್ ಪ್ರಸಾದ್ ಟೌನ್ ಹಾಲ್ನಲ್ಲಿ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಆಯುಕ್ತರು, ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಎರಡು ದಿನಗಳಿಂದ 21 ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿದೆ. ಆತಂಕಕಾರಿ ವಿಚಾರ ಅಂದರೆ ಮಹಾರಾಷ್ಟ್ರದಲ್ಲಿ ಅತಿ ಬೇಗ ಸ್ಪ್ರೆಡ್ ಆಗುವ ಯುಕೆ, ಸೌತ್ ಆಫ್ರಿಕಾ, ಬ್ರೆಜಿಲ್ನ ಕೋವಿಡ್ ವೇರಿಯೆಂಟ್ ಕಂಡು ಬರುತ್ತಿವೆ. ಹೀಗಾಗಿ ಕೇರಳ, ಮಹಾರಾಷ್ಟ್ರದಿಂದ ರಾಜ್ಯದಲ್ಲೂ ಸೋಂಕು ಹಬ್ಬುವ ಸಾಧ್ಯತೆ ಇದೆ. ಈಗಲೇ ಎಚ್ಚೆತ್ತುಕೊಳ್ಳಬೇಕಿದ್ದು, ಪ್ರತಿದಿನ ಇದಕ್ಕಾಗಿ ಸಭೆ ಆಗುತ್ತಿದೆ ಎಂದರು.
ಮಂಜುಶ್ರೀ ನರ್ಸಿಂಗ್ ಕಾಲೇಜ್ನಲ್ಲಿ ಕೇರಳದಿಂದ ಬಂದ 210 ಮಂದಿಯಲ್ಲಿ 40 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೊಮ್ಮನಹಳ್ಳಿ ಅಪಾರ್ಟ್ಮೆಂಟ್ನಲ್ಲಿ 1050 ಮಂದಿಯಲ್ಲಿ 106 ಜನರಿಗೆ ಸೋಂಕು ತಗುಲಿದ್ದು ಎಚ್ಚರಿಕೆ ವಹಿಸಬೇಕಿದೆ ಎಂದರು.
ನಿಬಂಧನೆಯೇನು?
ರಾಜ್ಯದ ಗಡಿಭಾಗ ಆಗಿರುವುದರಿಂದ ರಾಜ್ಯದಲ್ಲಿ ಕೆಲವು ನಿಬಂಧನೆ ವಿಧಿಸಲಾಗಿದೆ. ಕೇರಳದಿಂದ ಬರುವವರು 72 ಗಂಟೆಯ ಅವಧಿಯಲ್ಲಿ ಮಾಡಿಸಿದ ನೆಗೆಟಿವ್ ಸರ್ಟಿಫಿಕೇಟ್ ತೋರಿಸಬೇಕು. ಇಲ್ಲವಾದಲ್ಲಿ ಕ್ವಾರಂಟೈನ್ನಲ್ಲಿದ್ದು ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು. ಈ ವೈರಸ್ ತಳಿ ಪತ್ತೆಗೆ ನಿಮ್ಹಾನ್ಸ್ ಟೆಸ್ಟಿಂಗ್ಗೂ ಕಳುಹಿಸಲಾಗುತ್ತಿದೆ ಎಂದರು. ಮಹಾರಾಷ್ಟ್ರದದಿಂದ ಬರುವವರಿಗೂ ಇದೇ ನಿಬಂಧನೆ ಬರಲಿದ್ದು, ಸದ್ಯದಲ್ಲೇ ರಾಜ್ಯ ಸರ್ಕಾರದಿಂದ ಆದೇಶ ಹೊರಬೀಳಲಿದೆ. ಎಲ್ಲ ಕಡೆ ಸರ್ಕಾರದ ಮಾರ್ಗಸೂಚಿಗಳನ್ನು ಬಿಬಿಎಂಪಿ ಹೆಚ್ಚು ಪ್ರಚಾರ ಮಾಡಲಿದೆ ಎಂದರು.
ಕಳೆದ ಜೂನ್ ವೇಳೆ ಹೆಚ್ಚು ಸಿಬ್ಬಂದಿಯನ್ನು ಕೊರೊನಾ ಟೆಸ್ಟ್ ಮಾಡಲು ತೆಗೆದುಕೊಳ್ಳಲಾಗಿತ್ತು. ನಂತರ ವಾಪಸ್ ಕಳುಹಿಸಿದವರನ್ನು ಮತ್ತೆ ಕರೆಸಿ ಟೆಸ್ಟಿಂಗ್ಗೆ ನಿಯೋಜಿಸಲಾಗುತ್ತದೆ. ಮೂರನೇ ಹಂತದ ವ್ಯಾಕ್ಸಿಂಗ್ನಲ್ಲಿ ಕೋಮಾರ್ಬಿಟ್ ರೋಗಿಗಳನ್ನು ಪತ್ತೆ ಹಚ್ಚಲು ಆ್ಯಪ್ ಡೆವಲಪ್ ಆಗಿದೆ. ಅದರಲ್ಲಿ ಸೆಲ್ಫ್ ರಿಜಿಸ್ಟರ್ ಅಥವಾ ಪಾಲಿಕೆ ಸಿಬ್ಬಂದಿಯೇ ರಿಜಿಸ್ಟರ್ ಮಾಡಲಿದ್ದಾರೆ.
ಸ್ಲಂಗಳಲ್ಲಿ ಬ್ಲಡ್ ಚೆಕಪ್ ಮಾಡಿದಾಗಲೂ ಆಟೋಮೇಟಿಕ್ ಆಗಿ ಆ್ಯಪ್ಗೆ ಮಾಹಿತಿ ಅಪ್ಲೋಡ್ ಆಗಲಿದೆ. ದೇಶದಲ್ಲೇ ಮೊದಲ ಬಾರಿಗೆ ಮಾಡಿರುವ ಈ ಆ್ಯಪ್ ಆರೋಗ್ಯ ಮಾಹಿತಿ ಸಂಗ್ರಹಿಸಿಡಲು ಸಹಕಾರಿ ಎಂದರು.
ಈ ಸುದ್ದಿಯನ್ನೂ ಓದಿ: ಭಾರತದ ಕೋವಿಡ್ ಹೋರಾಟ.. 1 ಕೋಟಿ ಮಂದಿಗೆ ಲಸಿಕೆ.. 1.39 ಲಕ್ಷ ಕೇಸ್ ಮಾತ್ರ ಆ್ಯಕ್ಟೀವ್..
ಬೇರೆ ರಾಜ್ಯದಿಂದ ಪ್ರಯಾಣಿಸಿದವರು ಕೋವಿಡ್ ಟೆಸ್ಟ್ ಮಾಡಿದಾಗ ಸಿ.ಟಿ. ವ್ಯಾಲ್ಯೂ ಇಪ್ಪತ್ತಕ್ಕಿಂತ ಕಡಿಮೆ ಇದ್ದದ್ದನ್ನು ನಿಮ್ಹಾನ್ಸ್ಗೆ ಜಿನೋಮ್ ಸ್ವೀಕ್ವೆನ್ಸ್ ಟೆಸ್ಟ್ಗೆ ಕಳುಹಿಸಲಾಗಿದೆ ಎಂದರು.
ಗಡಿಯಲ್ಲಿ ವಾಹನಗಳ ಚೆಕಪ್ ಮಾಡುವ ಆದೇಶ ಇಲ್ಲ. ಕೇರಳದಿಂದ ಬರುವವರ ಬಗ್ಗೆ ನಿಗಾ ವಹಿಸುವುದು ಹೋಟೇಲ್- ರೆಸ್ಟೋರೆಂಟ್, ಸಂಸ್ಥೆಗಳು, ಅಪಾರ್ಟ್ಮೆಂಟ್ಗಳ ಮಾಲೀಕರ ಜವಾಬ್ದಾರಿ ಎಂದರು.
ನಾಳೆಗೆ ಅಂತ್ಯ:
ಮೊದಲ ಹಂತದ ಕೋವಿಡ್ ವ್ಯಾಕ್ಸಿನ್ ವಿತರಣೆ ನಾಳೆಗೆ ಅಂತ್ಯವಾಗಲಿದೆ. 1,40,000 ಆರೋಗ್ಯ ಕಾರ್ಯಕರ್ತರು, 60 ಸಾವಿರ ಫ್ರಂಟ್ ಲೈನ್ ವರ್ಕರ್ಸ್ ಇದ್ದರು. ಈ ಪೈಕಿ, ಸುಮಾರು 1 ಲಕ್ಷ ಜನರು ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಶೇ 50ರಷ್ಟು ಕಂಪ್ಲೀಟ್ ಆಗಿದೆ. ರಾಜ್ಯ ಸರ್ಕಾರ ಇದರ ಅವಧಿ ಮುಂದುವರೆಸಿದರೆ ಮತ್ತೆ ವ್ಯಾಕ್ಸಿನ್ ಮುಂದುವರೆಸಲಾಗುವುದು ಎಂದರು.