ಬೆಂಗಳೂರು: ಕೇಂದ್ರ ಸರ್ಕಾರ ರಕ್ಷಣಾ ಕ್ಷೇತ್ರದ ಕೈಗಾರಿಕೆಗಳಲ್ಲಿ ಶೇ. 74ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಿದೆ. ಇದು ದೇಶದ ಭದ್ರತೆಯ ದೃಷ್ಟಿಯಿಂದ ಆತಂಕಕಾರಿ ಸಂಗತಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಕ್ಷಣಾ ಇಲಾಖೆಯಲ್ಲಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟರೆ ಪಾಕಿಸ್ತಾನ, ಚೀನಾ, ಅಮೆರಿಕ ಸೇರಿದಂತೆ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಾಮಗ್ರಿಗಳನ್ನು ಪೊರೈಸದಿದ್ದರೆ ದೇಶದ ಪರಿಸ್ಥಿತಿ ಏನು? ಮೇಡ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತಿದ್ದ, ವಿದೇಶಿ ಹೂಡಿಕೆ ವಿರೋಧಿಸುತ್ತಿದ್ದ ಬಿಜೆಪಿಯವರೇ ಈಗ ಶೇ. 74ರಷ್ಟು ಹೂಡಿಕೆಗೆ ಅವಕಾಶ ಕೊಟ್ಟಿದ್ದಾರೆ. ಇದರಲ್ಲಿ ಅವರು ಎಡವಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಉದ್ದೇಶಕ್ಕೆ ಕಾಂಗ್ರೆಸ್ ಪಕ್ಷ ಇದುವರೆಗೂ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ನೀಡಿರಲಿಲ್ಲ. ಇದೀಗ ದೇಶ ರಕ್ಷಿಸುವ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇಂಥದ್ದೊಂದು ನಿರ್ಧಾರ ಕೈಗೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇಂದು ಭಾರತಕ್ಕೆ ಅತ್ಯಂತ ಕರಾಳ ದಿನ. ನೋವಿನಿಂದ ಈ ಮಾತನ್ನು ಹೇಳುತ್ತಿದ್ದೇನೆ. ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೇಶದಲ್ಲಿ 97,000 ಗಡಿ ದಾಟುತ್ತಿದೆ. ವಿಶ್ವದಲ್ಲಿ ಚೀನಾದಲ್ಲಿ 94,000 ಪ್ರಕರಣ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಇದರ ಶ್ರೇಯಸ್ಸು ಮೋದಿಯವರಿಗೆ ಸಲ್ಲಬೇಕು. ಇದುವರೆಗೂ ದೇಶದಲ್ಲಿ 1 ಕೋಟಿ 35 ಲಕ್ಷ ಮಂದಿಗೆ ಕೊರೊನಾ ಟೆಸ್ಟ್ ಆಗಬೇಕಿತ್ತು. ಆದರೆ ಇಂದು ಕೇವಲ 20 ಲಕ್ಷ ಟೆಸ್ಟ್ ಆಗಿದೆ ಅಷ್ಟೆ. ಚಪ್ಪಾಳೆ, ಜಾಗಟೆ, ದೀಪ ಹಚ್ಚಲು ಹೇಳಿದ್ರಿ, ಲಾಕ್‌ಡೌನ್ ಮಾಡಿದ್ರಿ. ಮಾರ್ಚ್ 24ರಂದು ಲಾಕ್‌ಡೌನ್ ಆದ ಸಂದರ್ಭ ದೇಶದಲ್ಲಿದ್ದ ಪ್ರಕರಣಗಳು 564 ಮಾತ್ರ. ಆದರೆ ಇಂದು 97,000 ಆಗಿವೆ. ಇದಕ್ಕೆ ಯಾರು ಕಾರಣ ಮೋದಿಯವರೇ? ಉತ್ತರ ಕೊಡಿ ಎಂದರು.
20 ಲಕ್ಷ ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡ್ತಾರೆ. ಆದರೆ ಆರ್ಥಿಕ ತಜ್ಞರ ಪ್ರಕಾರ ಇದು ಕೇವಲ 1 ಲಕ್ಷ 65 ಸಾವಿರ ಕೋಟಿ ರೂ. ಮಾತ್ರ. ಅಲ್ಲದೆ ನೀವು ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಎಷ್ಟು ಪ್ಯಾಕೇಜ್ ಘೋಷಿಸಿದ್ದೀರಾ? ಎಷ್ಟು ಖರ್ಚು ಮಾಡಿದ್ದೀರಾ? ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.
ವಿಜಯ್ ಮಲ್ಯ ಅವರಂತಹ ಉದ್ಯಮಿಗಳ ಸಾಲ ಮನ್ನಾ ಮಾಡ್ತೀರಾ. ಆದರೆ ದೇಶದ ರೈತರ ಸಾಲ ಮನ್ನಾ ಮಾಡಲಿಲ್ಲ. ಸಣ್ಣ ಕೈಗಾರಿಕೆಗಳಿಗೆ ಸಾಲ ಕೊಡ್ತೀವಿ ಎಂದು ಹೇಳ್ತಾರೆ. ಈಗಾಗಲೇ ಅವರು ಸಂಕಷ್ಟದಲ್ಲಿದ್ದಾರೆ. ಮತ್ತೆ ಅವರನ್ನು ಸಾಲಗಾರರನ್ನಾಗಿ ಮಾಡ್ತೀರಾ ಮೋದಿಯವರೇ?. ಆರ್ಎಸ್ಎಸ್ನವರು ಹೇಳಿರಬೇಕು. ಇದೇನಾ ನಮಸ್ತೆ ಸದಾವತ್ಸಲೆ ಅರ್ಥ ಎಂದು ಪ್ರಶ್ನಿಸಿದರು.
ಒನ್ ನೇಷನ್, ಒನ್ ಕಾರ್ಡ್ ಮಾಡ್ತೀವಿ ಎಂದು ಹೇಳ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಪಡಿತರ ಸಿಗುತ್ತೆ. ಆದರೆ ರಾಜಸ್ಥಾನಕ್ಕೆ ಹೊದರೆ ಅಲ್ಲಿ ದುಡ್ಡು ಕೊಟ್ಟು ರೇಷನ್ ಪಡೆಯಬೇಕು. ಇದರಲ್ಲಿ ನ್ಯಾಯ ಎಲ್ಲಿದೆ? ಲಾಕ್‌ಡೌನ್ ಎಂದು ಹೇಳ್ತಾರೆ, ಎಲ್ಲಾ ಓಪನ್ ಇದೆ. ಇವತ್ತು ಒಂದೇ ದಿನ ರಾಜ್ಯದಲ್ಲಿ 84 ಪ್ರಕರಣ ಪತ್ತೆಯಾಗಿದೆ. ಇನ್ನು ಸಂಜೆಯ ವೇಳೆಗೆ ಎಷ್ಟು ಹೆಚ್ಚಾಗಬಹುದು. ಭಾನುವಾರ ಮಾತ್ರ ಸಂಪೂರ್ಣ ಲಾಕ್‌ಡೌನ್ ಮಾಡಿದ್ದಾರೆ. ಆದರೆ ಸೋಮವಾರ, ಮಂಗಳವಾರ ಕರೊನಾ ಹರಡೋದಿಲ್ವಾ?. ಇದು ಯಡಿಯೂರಪ್ಪನವರ ತುಘಲಕ್ ದರ್ಬಾರ್ ಎಂದು ಉಗ್ರಪ್ಪ ಕಿಡಿಕಾರಿದ್ದಾರೆ.
ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಎಲ್ಲಿಯವರೆಗೆ ಹೋಗುತ್ತೋ ಗೊತ್ತಿಲ್ಲ. ಎಲ್ಲಾ ದೇಶಗಳನ್ನು ಮೀರಿಸಿ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿಪಕ್ಷ ನಾಯಕರನ್ನು ವಿಶ್ವಾಸಕ್ಕೆ ಪಡೆಯದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಒಂದು ಕಡೆ ಕೊರೊನಾದಿಂದ ಜನ ಸಾವನ್ನಪ್ಪಿದ್ರೆ, ಹಸಿವಿನಿಂದ ನೂರಾರು ಜನ ಸಾವನ್ನಪ್ಪಿದ್ದಾರೆ. ಇದರ ಹೊಣೆ ಯಾರು ಹೊರಬೇಕು? ಯಡಿಯೂರಪ್ಪನವರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ವಿಫಲವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿರ್ದೇಶಕರಾದರೆ, ಸಿಎಂ ಯಡಿಯೂರಪ್ಪ ನಟ. ಪ್ರಧಾನಿ ಹೇಳಿದಂತೆ ಕೇಳುವುದಷ್ಟೆ ಯಡಿಯೂರಪ್ಪನವರ ಕೆಲಸ ಆಗಿದೆ. ಬೇರೆ ಬೇರೆ ರಾಜ್ಯದಲ್ಲಿ ಎಷ್ಟು ಪ್ಯಾಕೇಜ್ ಕೊಟ್ಟಿದ್ದಾರೆ. ಕೊರೊನಾ ನಿಯಂತ್ರಣ ಮಾಡ್ತಿದ್ದಾರೆ. ಆದರೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಹಣ ರಾಜ್ಯಕ್ಕೆ ಕೊಡುತ್ತಿಲ್ಲ. ಇವರು ಕೇಳುತ್ತಿಲ್ಲ ಎಂದು ಆರೋಪಿಸಿದರು.