ಬೆಂಗಳೂರು: ಕಡಿಮೆ ಅವಧಿಯ ಸಾಲ ಸೌಲಭ್ಯವನ್ನು ರೈತರಿಗೆ ನೀಡಲಾಗಿದ್ದು, ಜೂನ್ನಿಂದ ಬೆಳೆ ಸಾಲ ಮರುಪಾವತಿಸುವುದು ಅನಿವಾರ್ಯ ಎಂದು ಸಹಕಾರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಹಕಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ 1,466 ಕೋಟಿ ರೂ. ಸಾಲ ಸೌಲಭ್ಯ ನೀಡಲಾಗಿದೆ. ಇದನ್ನು ವಸೂಲಿ ಮಾಡಬೇಕಾಗಿದೆ. ಜೂನ್ವರೆಗೆ ವಸೂಲಿ ತಟಸ್ಥಗೊಳಿಸಿದ್ದೆವು. ಜೂನ್ವರೆಗೆ ವಿಸ್ತರಿಸಿದರೆ ನಮಗೆ ಸಮಸ್ಯೆಯಾಗಲಿದೆ. ಮೇ 31ರವರೆಗೆ ಸಾಲ ಮರುಪಾವತಿಸಲು ಅಂತಿಮ ಗಡುವು ನೀಡಲಾಗಿದ್ದು, ಜೂನ್ನಿಂದ ಸಾಲ ವಸೂಲಾತಿ ಪ್ರಕ್ರಿಯೆ ನಡೆಯಲಿದೆ ಎಂದರು.
ಶ್ರೀಶಕ್ತಿ ಗುಂಪುಗಳಿಗೆ ಕಾಯಕ ಯೋಜನೆಯಡಿ ಅನುದಾನ ನೀಡುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಅವರು ನೆರವಾಗಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ತಯಾರಿಸಿ ನೀಡುತ್ತಿದ್ದಾರೆ. ಹೀಗಾಗಿ, ಅವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದೇವೆ. ಸಾಲ ನೀಡಿದರೆ ವಸೂಲಿ ಮಾಡಲು ಅವಕಾಶವಿದೆ ಎಂದರು.
ಸಹಕಾರ ಇಲಾಖೆಗೆ ನಾಲ್ಕು ವಿಭಾಗಗಳು ಬರಲಿದ್ದು, ಮೈಸೂರು ಭಾಗದ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಬೆಂಗಳೂರು ವಿಭಾಗದ ಸಭೆ ನಡೆಯುತ್ತಿದ್ದು, ಈಗಾಗಲೇ ಮುಂಗಾರು ಆರಂಭವಾಗಿದೆ. ಕೃಷಿ ಸಾಲ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದ್ದೇವೆ. ಕಳೆದ ಬಾರಿ 9,4241 ರೈತರಿಗೆ 712 ಕೋಟಿ ರೂ. ಸಾಲ ನೀಡಿದ್ದೆವು. ಈ ವರ್ಷ 1,35,977 ರೈತರಿಗೆ 916 ಕೋಟಿ ರೂ. ಸಾಲ ನೀಡಿದ್ದು, ಮುಂದಿನ ವರ್ಷ 14 ಸಾವಿರ ಕೋಟಿ ರೂ. ಸಾಲ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ದಲಿತ ಸಮುದಾಯಕ್ಕೆ ಹೆಚ್ಚಿನ ಯೋಜನೆ ಮಂಜೂರು ಮಾಡಿದ್ದೇವೆ. ಅವರಿಗೆ ಸಾಲ ಸೌಲಭ್ಯ ನೀಡಲು ನಿರ್ಧಾರಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಎಸ್ಸಿ, ಎಸ್ಟಿ ರೈತರಿಗೆ ಸಾಲ ಸೌಲಭ್ಯ ನೀಡುತ್ತಿದ್ದೇವೆ ಎಂದರು.
ಎಪಿಎಂಸಿ ಕಾಯ್ದೆಗೆ ಕಾಂಗ್ರೆಸ್ ವಿರೋಧ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ 68 ಸಂಸ್ಥೆಗಳಿಗೆ ಅವಕಾಶ ಕೊಡಲಾಗಿದೆ. ರೈತರಿಂದ ಬೆಳೆ ನೇರ ಖರೀದಿಗೆ ಅವಕಾಶ ನೀಡಲಾಗಿದೆ. ಈಗ ಮತ್ತಷ್ಟು ಖಾಸಗಿಯವರಿಗೆ ಅವಕಾಶ ಸಿಗಲಿದೆ. ಇದರಿಂದ ರೈತರ ಬೆಳೆ ನೇರ ಮಾರಾಟಕ್ಕೆ ಅವಕಾಶವಿದೆ. ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಾಟ ಮಾಡಿಕೊಳ್ಳಬಹುದು. ಎಪಿಎಂಸಿ ಕಾಯ್ದೆಗೆ ಎಲ್ಲೂ ವಿರೋಧವಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರೋಧಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.