ಬೆಂಗಳೂರು: ಸಕ್ಕರೆ ಇಲಾಖೆ ರೈತರಿಗೆ ಕಹಿ ಸುದ್ದಿ ಕೊಡಲು ಸಾಧ್ಯವಿಲ್ಲ. ಸಕ್ಕರೆ ಇಲಾಖೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಲಿದೆ. ಸಿಎಂಗೆ ಸಭೆಯ ಮಾಹಿತಿ ನೀಡಿ, ರೈತರ ನಿರೀಕ್ಷೆಗಳನ್ನು ಅವರಿಗೆ ಹೇಳುತ್ತೇನೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ಕಬ್ಬು ಬೆಳೆಗಾರರ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ರೈತ ಮುಖಂಡರು ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ತೂಕದಲ್ಲಿ ಮೋಸ ಆಗುವುದು, ಕಟಾವು ಮತ್ತು ಸಾಗಾಟ ದರದಲ್ಲೂ ಕೆಲ ಕಾರ್ಖಾನೆಗಳು ಅನ್ಯಾಯ ಮಾಡುತ್ತಿವೆ ಎಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ. FRP ದರ ಈಗಾಗಲೇ ನಿಗದಿಯಾಗಿದೆ. ಅದಕ್ಕೆ ಹೆಚ್ಚು ಹಣ ಕೊಡಬೇಕು ಎಂದು ಹೇಳಿದ್ದಾರೆ. ಸಿಎಂ ಅವರು ಕಾರ್ಖಾನೆ ಮಾಲೀಕರು ಹಾಗೂ ರೈತರ ಮುಖಂಡ ಜೊತೆ ಸಭೆ ಮಾಡಿ ವರದಿ ಕೊಡಲು ಹೇಳಿದ್ದರು. ಒಂದು ವರ್ಷದಲ್ಲಿ ಕಬ್ಬಿನ ಬಾಕಿ 19,634 ಕೋಟಿ ರೂಪಾಯಿಯಲ್ಲಿ ಕೇವಲ 11 ಕೋಟಿ ಮಾತ್ರ ಬಾಕಿಯಿದೆ. ರೈತ ಸಮುದಾಯಕ್ಕೆ ಹಣ ಕೊಡಿಸುವ ಕೆಲಸ ಸರ್ಕಾರ ಮಾಡಿದೆ ಎಂದರು.
ನಾಳೆ ಬೆಳಗ್ಗೆಯಷ್ಟರಲ್ಲಿ ಹಳಿಯಾಳ ಸಮಸ್ಯೆ ಬಗೆ ಹರಿಸುತ್ತೇವೆ : ಹಳಿಯಾಳದ ಇಐಡಿ (EID) ಫ್ಯಾರಿ ಕಾರ್ಖಾನೆ ಸಾಗಾಣಿಕೆ ವೆಚ್ಚದಲ್ಲಿ ಮೋಸ ಮಾಡಿದೆ ಎಂದು ವರದಿ ನೀಡಿದ್ದಾರೆ. ನಾಳೆ ಬೆಳಿಗ್ಗೆಯಷ್ಟರಲ್ಲಿ ಹಳಿಯಾಳ ಕಾರ್ಖಾನೆ ಸಮಸ್ಯೆ ಬಗೆ ಹರಿಸುತ್ತೇವೆ. ಸಕ್ಕರೆ ಕಾರ್ಖಾನೆ ಮಾಲೀಕರು ಎಷ್ಟೇ ದೊಡ್ಡವರು ಇದ್ದರು ಸರ್ಕಾರ ನಿಯಮ ಪಾಲನೆ ಮಾಡದೆ ಹೋದರೆ ಅವರ ಮೇಲೆ ಕ್ರಮ ಆಗುತ್ತದೆ. ಎಸ್‌ಎಪಿ ಬಗ್ಗೆ ಸಿಎಂ ಜೊತೆ ಮಾತುಕತೆ ಆಗಿದೆ. 72 ಫ್ಯಾಕ್ಟರಿಯಲ್ಲಿ ಬೆಲೆ ನಿಗದಿಯಾಗಿದೆ. ಒಂದೆಡೆ ರೂ. 3,800 ಆಗಿದೆ, 3,500 ಮತ್ತು 3,200 ರಷ್ಟು ಬೆಲೆ ನಿಗದಿ ಆಗಿದೆ. ಇನ್ನು ಹೆಚ್ಚು ಮಾಡಿ ಎಂದು ಮುಖಂಡರ ಹೇಳಿದ್ದಾರೆ. ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಕೇಂದ್ರ ಜೊತೆ ಮಾತು ಕತೆ : ಎರಡು ದಿನದಲ್ಲಿ ಕಬ್ಬು ನಿಯಂತ್ರಣ ಮಂಡಲಿ ಸಭೆ ಮಾಡುತ್ತೇನೆ. ಕೇಂದ್ರ ಸರ್ಕಾರಕ್ಕೂ ಶಿಫಾರಸು ಮಾಡುತ್ತೇನೆ. ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿದೆ. ಆದ್ದರಿಂದ ಹೊಸ ಕಾರ್ಖಾನೆಗಳ ಪ್ರಾರಂಭಕ್ಕೆ ಅರ್ಜಿ ಹಾಕಿದ್ದಾರೆ. ಕಾರ್ಖಾನೆಗಳ ಮಾಲೀಕರು ನಿಯಮ ಪಾಲನೆ ಮಾಡಬೇಕು. ಯಾವುದೇ ಪಕ್ಷದ ನಾಯಕರು ಇದ್ದರೂ ಪಾಲನೆ ಆಗಬೇಕು ಎಂದು ತಿಳಿಸಿದರು.
ನಾಳೆ ಮುಖ್ಯಮಂತ್ರಿ ಗಮನಕ್ಕೆ : ಸರ್ಕಾರ ಮಂತ್ರಿಗೊಂದು, ಸಾಮಾನ್ಯನಿಗೊಂದು, ಬಲಾಡ್ಯ ಕಾರ್ಖಾನೆಗೊಂದು ಕಾನೂನು ಮಾಡಲು ಹೋಗುವುದಿಲ್ಲ. ರೈತರಿಗೆ ಅನ್ಯಾಯವಾದರೆ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆ ಜರಿಯುವುದಿಲ್ಲ. ನಿಮ್ಮ ಸಲಹೆ, ಸಮಸ್ಯೆಗಳನ್ನು ನಾನು ನೋಟ್ ಮಾಡಿದ್ದೇನೆ. ನಿಮ್ಮ ಎಲ್ಲಾ ಸಲಹೆಗಳನ್ನು ಸರ್ಕಾರ ಪರಿಗಣಿಸುತ್ತೇವೆ. ನಾಳೆಯೊಳಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
ಸಚಿವರ ಮುಂದೆ ಪ್ರತಿಭಟನೆ, ಧಿಕ್ಕಾರ: ಸಚಿವರ ಭರವಸೆಗೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಹಳಿಯಾಳದ ಇಐಡಿ ಪ್ಯಾರಿ ಕಾರ್ಖಾನೆಯಿಂದ ರೈತರಿಗೆ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಮುಗಿಸಿ ಹೊರ ಬಂದ ಸಚಿವರ ಕಾಲಿನ ಮುಂದೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಆಕ್ರೋಶದಿಂದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮುಂದೆ ಕುಳಿತು ಧರಣಿ ನಡೆಸಿದರು. ಹಳಿಯಾಳದ ಕಾರ್ಖಾನೆ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ರೈತರ ಸಭೆಗೆ ಬಾರದ ಸಿಎಂ ವಿರುದ್ಧ ರೈತ ಮುಖಂಡರ ಆಕ್ರೋಶ ಹೊರಹಾಕಿದರು. ಪ್ರಭಾಕರ್ ಕೋರೆ ಹುಟ್ಟು ಹಬ್ಬಕ್ಕೆ ತೆರಳಿರುವ ಸಿಎಂ ವಿರುದ್ಧ ಧಿಕ್ಕಾರ ಕೂಗಿದರು. ಸಿಎಂ ವಿರುದ್ಧ ಧಿಕ್ಕಾರ ಕೂಗುತ್ತಲೇ ರೈತರು ಹೊರನಡೆದರು. ರೈತ ವಿರೋಧಿ ಸರ್ಕಾರ ಎಂದು ರೈತ ಮುಖಂಡರು ಘೋಷಣೆ ಕೂಗಿದರು.
ಇದನ್ನೂ ಓದಿ : ಆಯುಕ್ತರ ಸಭೆಯಲ್ಲೂ ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ: ಸಿಎಂ ನೇತೃತ್ವದಲ್ಲಿ ಸಭೆ