ಬೆಂಗಳೂರು: ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಮಾಡಬೇಕೆಂಬುದು ರೈತ ನಾಯಕರಾದ ನಂಜುಂಡಸ್ವಾಮಿ, ಎನ್.ಡಿ ಸುಂದರೇಶ್ ಕನಸಾಗಿತ್ತು. ಆ ಕನಸು ಈಡೇರುವ ಸಮಯ ಹತ್ತಿರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಚೋದನೆಗೆ ಒಳಗಾಗಬೇಡಿ ಎಂದು ಬಂದ್ ಕರೆ ನೀಡಿರುವ ರೈತ ಸಂಘಟನೆಗಳಿಗೆ ಸಚಿವ ಸಿ.ಟಿ ರವಿ ಮನವಿ ಮಾಡಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ತಿಳಿವಳಿಕೆಗೆ ರೈತರು ಒಳಗಾಗಬಾರದು. ಒಂದು ಅಂಗಡಿ ಇದ್ದರೆ, ಅವರು ಹೇಳಿದ ಬೆಲೆಯೇ ಅಂತಿಮವಾಗಲಿದೆ. ಅದೇ 10 ಮಂದಿ ವ್ಯಾಪಾರಸ್ಥರು ಬಂದರೆ ರೈತರಿಗೆ ಉತ್ತಮ ಬೆಲೆ ಸಿಗಲಿದೆ. ಅಲ್ಲದೇ ಎಪಿಎಂಸಿ ಮಂಡಿಯಿಂದ ರೈತರ ಶೋಷಣೆಯಾಗುತ್ತಿದೆ, ದಲ್ಲಾಳಿಗಳು ಬೆಲೆಯನ್ನು ನಿಗದಿ ಮಾಡುತ್ತಿದ್ದಾರೆ ಎಂದು ರೈತರು ಹೋರಾಟ ಮಾಡಿದ್ದರು. ಮಂಡಿಗಳನ್ನು ದಲ್ಲಾಳಿ ಮುಕ್ತ ಮಾಡಬೇಕು ಹಾಗೂ ರೈತರ ಆದಾಯ ದ್ವಿಗುಣವಾಗಬೇಕು ಎಂದು ಈ ಕಾಯ್ದೆಯನ್ನು ಪ್ರಧಾನಿ ಮೋದಿ ಜಾರಿ ಮಾಡಿದ್ದಾರೆ ಎಂದು ಕಾಯ್ದೆಯನ್ನು ಸಮರ್ಥಿಸಿಕೊಂಡರು.
ರೈತ ನಾಯಕರಾದ ನಂಜುಂಡಸ್ವಾಮಿ ಹಾಗೂ ಎಂ.ಡಿ ಸುಂದರೇಶ್ ಅವರ ಭಾಷಣಗಳನ್ನು ಗಮನಿಸಿ. ನಾವು ಬೆಳೆದ ಬೆಳೆಗೆ ಬೆಲೆ ಕಟ್ಟಲು ಅವರು ಯಾರು? ನಾವು ಬೆಲೆ ಕಟ್ಟಬೇಕು ಎಂದು ಹೇಳುತ್ತಿದ್ದರು. ಈಗ ರೈತರು ತಮ್ಮ ಬೆಳೆಗೆ ಬೆಲೆ ಕಟ್ಟುವ ಕಾಲ ಬರುತ್ತದೆ. ಈಗ ತಪ್ಪು ದಾರಿಗೆ ಹಿಡಿಯಬೇಡಿ. ಕಾಂಗ್ರೆಸ್ ನಿಮ್ಮನ್ನು ಪ್ರಚೋದಿಸುತ್ತದೆ ಅಷ್ಟೇ. ಈ ಹಿಂದೆ ಎಪಿಎಂಸಿ ಕಾಯ್ದೆ ರದ್ದು ಮಾಡುವ ಅಂಶ ಅವರ ಪ್ರಣಾಳಿಕೆಯಲ್ಲಿಯೇ ಇತ್ತು. ಅವರು ಕೇವಲ ನಾಟಕ ಮಾಡುತ್ತಿದ್ದಾರೆ ಹಾಗಾಗಿ ಹೋರಾಟ, ಬಂದ್ ಕೈಬಿಡಿ ಎಂದು ಮನವಿ ಮಾಡಿದರು.
ನಿನ್ನೆ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ ವಿಶ್ವಾಸ ಕಳೆದುಕೊಂಡವರ ಬಡಬಡಿಕೆ ತರ ಇತ್ತು. ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ವಿಶ್ವಾಸ ಇಲ್ಲದಿರುವ ಕಾರಣಕ್ಕಾಗಿ ಅವಿಶ್ವಾಸದ ಮೂಲಕ ವಿಶ್ವಾಸ ತೋರಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಆದರೆ ಅದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಪೈಪೋಟಿ ರೀತಿ ಕಾಣುತ್ತಿತ್ತು. ತಬಲಾ, ಹಾರ್ಮೋನಿಯಂ ಜುಗಲಬಂದಿ ರೀತಿ ಕಾಣುತ್ತಿತ್ತು. ಅವಿಶ್ವಾಸ ನಿರ್ಣಯದ ರಾಜಕಾರಣದ ರೀತಿ ಕಂಡು ಬರಲಿಲ್ಲ ಎಂದು ಅವರು ಟೀಕಿಸಿದರು.