ಬೆಂಗಳೂರು: ಕರೀಂ ಲಾಲಾ ತೆಲಗಿ ಎಂಬ ಹೆಸರು ಕೇಳಿದರೆ ಮೊದಲು ನೆನಪಾಗುವುದೇ ನಕಲಿ ಛಾಪಾ ಕಾಗದ ಹಗರಣ. ಇಡೀ ಸರ್ಕಾರದ ಆರ್ಥಿಕ ಅಡಿಪಾಯವನ್ನೇ ಅಲುಗಾಡಿಸಿದ್ದ ಹಗರಣವಿದು. ಸದ್ಯ ತೆಲಗಿ ಸತ್ತು ವರುಷಗಳೇ ಕಳೆದ್ರೂ ಆತನ ಸಂತತಿ ಮಾತ್ರ ಇನ್ನೂ ಜೀವಂತವಾಗಿದೆ.
ನಕಲಿ ಛಾಪಾ ಕಾಗದದ ಮೂಲಕ ಡೀಲ್ ನಡೆಸುತ್ತಿದ್ದ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಇದೀಗ ಬಂಧಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಾದ ವಿಶ್ವನಾಥ, ಕಾರ್ತಿಕ್, ವೆಂಕಟೇಶ, ಶ್ಯಾಮರಾಜು, ಶಶಿಧರ್, ಕರಿಯಪ್ಪ, ರವಿಶಂಕರ್, ಶಿವಶಂಕರಪ್ಪ, ಗುಣಶೇಖರ್ ಮತ್ತು ರಾಘವ್ ಎಂಬುವವರನ್ನು ಬಂಧಿಸಲಾಗಿದೆ.
ಇವರ ಬಳಿ 2,664 ನಕಲಿ ಛಾಪಾ ಕಾಗದಗಳು ಸಿಕ್ಕಿವೆ. ಇದರಲ್ಲಿ ಮೈಸೂರು ಒಡೆಯರ ಕಾಲದಿಂದ ಈವರೆಗಿನ ಛಾಪಾ ಕಾಗದಗಳು ಪತ್ತೆಯಾಗಿವೆ. ಛಾಪಾ ಕಾಗದಗಳ ಮೂಲಕ ಪ್ರಾಪರ್ಟಿಗಳ ಜಿಪಿಎ ಮಾಡುತ್ತಿದ್ದ ಗ್ಯಾಂಗ್, ನಾಲ್ಕು ಕಡೆ ನಕಲಿ ಛಾಪಾ ಕಾಗದ ಬಳಸಿ ವಂಚಿಸಿರುವುದು ಬೆಳಕಿಗೆ ಬಂದಿದೆ.
1990,1995, 2002, 2009 ರಲ್ಲಿ ರಿಜಿಸ್ಟರ್ ಆಗಿರುವಂತೆ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂ. ಬಾಳುವ ಆಸ್ತಿಗಳ ಜಿಪಿಎ ಮಾಡಿದ್ದಾರೆ. ಒಂದು ಛಾಪಾ ಕಾಗದವನ್ನು ಐದರಿಂದ ಎಂಟು ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್, ಜಿಪಿಎ ನಕಲು ಹೆಚ್ಚುವರಿಯಾಗಿ 25 ಸಾವಿರ ರೂ ಪಡೆಯುತ್ತಿದ್ದರು. ಆರೋಪಿಗಳು ಕಂದಾಯ ಭವನದಲ್ಲೇ ಬೇರು ಬಿಟ್ಟಿದ್ದು, ಸ್ಟ್ಯಾಂಪ್ ವೆಂಡರ್ ಮತ್ತು ಮಧ್ಯವರ್ತಿಗಳಾಗಿ ಕೆಲಸ ಮಾಡ್ತಿದ್ರು ಎಂದು ತಿಳಿದು ಬಂದಿದೆ. ಮುಖ್ಯವಾಗಿ ಕಂದಾಯ ಇಲಾಖೆಗೆ ಕಾಗದ ಪತ್ರಕ್ಕಾಗಿ ಅಲೆದಾಡುವವರನ್ನೇ ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದರು.
ಆರೋಪಿಗಳಿಂದ 118 ನಕಲಿ ಸೀಲ್ ಗಳು, ಒಂದು ಟೈಪಿಂಗ್ ಮಿಷನ್ ಸೀಜ್ ಮಾಡಲಾಗಿದೆ. ಸೀಜ್ ಆದ ನಕಲಿ ಛಾಪಾ ಕಾಗದದ ಅಂದಾಜು ಮೌಲ್ಯ1.33 ಕೋಟಿ ರೂ ಎನ್ನಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ವೆಂಕಟೇಶ್ ಈ ಹಿಂದೆ ಹಲಸೂರು ಗೇಟ್ ಪ್ರಕರಣದಲ್ಲೂ ಜೈಲು ಸೇರಿ ಬಂದಿದ್ದ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದರು.
ಇದನ್ನೂ ಓದಿ: ಎರಡೇ ದಿನದ ಹಸುಳೆಯ ಬಾವಿಗೆಸೆದ ಕ್ರೂರಿ; ಮಗು ಜೀವಂತ ಹೊರಬಂದಿದ್ದು ಹೀಗೆ!