ರಾಯಚೂರು: ನಗರಸಭೆ 31ನೇ ವಾರ್ಡ್ ಸದಸ್ಯೆ ರೇಣಮ್ಮ ಭೀಮರಾಯ ಸದಸ್ಯತ್ವ ರದ್ದುಪಡಿಸಿದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ನೀಡಿದ ನೋಟಿಸ್ ಹಿಂಪಡೆಯಲಾಗಿದೆ.
ಕರ್ನಾಟಕ ಪೌರಸಭೆಗಳ (ಅಧ್ಯಕ್ಷ ಮತ್ತು ಉಪಾಧ್ಯಕ್ಷ) ಚುನಾವಣಾ ನಿಯಮಗಳ 1956 (ನಿಯಮ 3(1)) ರ ಅಡಿಯಲ್ಲಿ ಸಭೆ ನೋಟಿಸ್ ಅನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣಾಧಿಕಾರಿಗಳು ನೀಡಿದ್ದರು. ಆದರೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು 2020 ಅ.29 ರಂದು ನಗರಸಭೆಯ ಸದಸ್ಯತ್ವವನ್ನ ರದ್ದುಪಡಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಸಭೆ ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಚುನಾವಣಾಧಿಕಾರಿ ಮತ್ತು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ತಿಳಿಸಿದ್ದಾರೆ.
ಅಲ್ಲದೇ ನೋಟಿಸ್ ಅನ್ನು ನಗರಸಭೆ ಪೌರಾಯುಕ್ತರ ಮುಖಾಂತರ ರವಾನಿಸಲಾಗಿದೆ. ಖುದ್ದಾಗಿ ಸಂಬಂಧಿಸಿದ ನಗರಸಭೆ ಸದಸ್ಯರಿಗೆ ಜಾರಿ ಇಲ್ಲವೆ ವಾರಸುದಾರರಿಗೆ ಅಥವಾ ಮನೆಯಲ್ಲಿ ಯಾರು ಇಲ್ಲದೆ ಇರುವ ಪಕ್ಷದಲ್ಲಿ ಮನೆಯ ಬಾಗಿಲಿಗೆ ಅಂಟಿಸಿ ಪಂಚನಾಮೆ ಮಾಡುವ ಮೂಲಕ ವಿಡಿಯೋ, ಫೋಟೋ ಚಿತ್ರೀಕರಣ ಮಾಡುವಂತೆ ಸೂಚಿಸಲಾಗಿದೆ. ಇನ್ನೂ ರೇಣಮ್ಮ ಸುಳ್ಳು ಜಾತಿ ಪ್ರಮಾಣ ಪಡೆದುಕೊಂಡಿದ್ದಾರೆ ಎನ್ನುವ ಆರೋಪವಿತ್ತು. ಈ ಸಂಬಂಧ ಸಮಿತಿ ರಚನೆ ಮಾಡಿ ಪರಿಶೀಲನೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ವರದಿ ಆಧಾರದ ಮೇಲೆ ಜಾತಿಪ್ರಮಾಣ ಪತ್ರ ರದ್ದು ಮಾಡಿದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯತ್ವ ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ನಗರಸಭೆ ಸದಸ್ಯೆಯ ನಕಲಿ ಜಾತಿ ಪ್ರಮಾಣಪತ್ರ ಆರೋಪ: ಅಧಿಕಾರಿಗಳಿಂದ ಪರಿಶೀಲನೆ