ಬೆಂಗಳೂರು: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ 24 ಮುಖಂಡರನ್ನು ಕಾಂಗ್ರೆಸ್ ಪಕ್ಷ ಉಚ್ಛಾಟನೆ ಮಾಡಿದೆ. ಪಕ್ಷದ ಟಿಕೆಟ್ ಕೈತಪ್ಪಿದ ಬಳಿಕ ಅಧಿಕೃತ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗದೇ, ಬಂಡಾಯವೆದ್ದು ಪಕ್ಷದ ವಿರುದ್ಧವೇ ಕಾರ್ಯನಿರ್ವಹಿಸುತ್ತಿದ್ದರು ಎಂದು ಆರೋಪಿಸಿ ಈ 24 ಮಂದಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಉಚ್ಛಾಟಿಸಲಾಗಿದೆ.
ಉಚ್ಛಾಟಿತರಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಶಾಸಕರು, ಮಾಜಿ ಸಚಿವರು, ಕಾಂಗ್ರೆಸ್ ಘಟಕದಲ್ಲಿ ಪ್ರಮುಖ ಸ್ಥಾನಮಾನ ಹೊಂದಿದ್ದವರು, ಕಾಂಗ್ರೆಸ್ ಮುಖಂಡರು ಹಾಗೂ ಟಿಕೆಟ್ ಸಿಗದೇ ಬಂಡಾಯ ಸ್ಪರ್ಧೆ ಮಾಡಿದವರು ಇದ್ದಾರೆ.
![ಉಚ್ಚಾಟಿತ ಅಭ್ಯರ್ಥಿಗಳು](https://etvbharatimages.akamaized.net/etvbharat/prod-images/kn-bng-02-congress-24-dismiss-script-7208077_03052023132701_0305f_1683100621_486.jpg)
ಬಂಡಾಯವಾಗಿ ಕಣಕ್ಕಿಳಿದ ಅಭ್ಯರ್ಥಿಗಳು ಈಗಲೂ ಕಾಂಗ್ರೆಸ್ ಪಕ್ಷದ ಬಾವುಟವನ್ನೇ ಬಳಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಮತದಾನಕ್ಕೆ ಇನ್ನು ಕೆಲ ದಿನ ಬಾಕಿ ಇದ್ದು, ಈ ಸಂದರ್ಭ ಕಾಂಗ್ರೆಸ್ ಪಕ್ಷ ಈ ತೀರ್ಮಾನ ಕೈಗೊಂಡಿದೆ. 24 ಅಭ್ಯರ್ಥಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಲಾಗಿದ್ದು, ಉಚ್ಛಾಟಿತರಾಗಿರುವ ಎಲ್ಲಾ 24 ಮಂದಿ ಸದಸ್ಯರು ಮುಂದಿನ ಆರು ವರ್ಷ ಕಾಂಗ್ರೆಸ್ ಪಕ್ಷ ಸೇರುವಂತಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸುತ್ತಿದ್ದ ಹಿನ್ನೆಲೆ ಈ 24 ಮಂದಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಈ ಕ್ರಮ ಕೈಗೊಂಡಿದ್ದಾರೆ.
ಉಚ್ಛಾಟಿತ ಪ್ರಮುಖ ನಾಯಕರ ವಿವರ: ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕುಣಿಗಲ್ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ, ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಹರಪನಹಳ್ಳಿಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ ಪ್ರಮುಖರಾಗಿದ್ದಾರೆ. ಉಳಿದಂತೆ ಅರಕಲಗೂಡು ಕಾಂಗ್ರೆಸ್ ನಾಯಕ ಕೃಷ್ಣೇಗೌಡ, ಬೀದರ್ ದಕ್ಷಿಣ ಕೆಪಿಸಿಸಿ ಸಂಯೋಜಕರಾದ ಚಂದ್ರಾ ಸಿಂಗ್, ತರಿಕೆರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋಪಿಕೃಷ್ಣ, ಖಾನಾಪುರದಲ್ಲಿ ಕಣಕ್ಕಿಳಿದಿರುವ ಬೆಳಗಾವಿ ಮಾಜಿ ಯುವ ಕಾಂಗ್ರೆಸ್ ಮುಖಂಡ ಇರ್ಫಾನ್ ತಾಳಿಕೋಟೆ, ತೇರದಾಳದ ಕಾಂಗ್ರೆಸ್ ಕಿಸಾನ್ ಸೆಲ್ ಉಪಾಧ್ಯಕ್ಷ ಡಾ.ಪದ್ಮಜೀತ್ ನಾಡಗೌಡ, ಹು-ಧಾರವಾಡ ಪಶ್ಚಿಮ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವರಾಜ್ ಮಲ್ಕಾರಿ, ನೆಲಮಂಗಲದ ಲೇಬರ್ ಸೆಲ್ ಉಪಾಧ್ಯಕ್ಷೆ ಉಮಾದೇವಿ, ಬೀದರ್ ದಕ್ಷಿಣದಿಂದ ಕಣಕ್ಕಿಳಿದಿರುವ ಬೀದರ್ ಡಿಸಿಸಿ ಉಪಾಧ್ಯಕ್ಷ ಯೂಸುಫ್ ಅಲೀ ಜಮ್ದಾರ್, ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬೀದರ್ ಎಸ್‍ಟಿ ಸೆಲ್ ಅಧ್ಯಕ್ಷ ನಾರಾಯಣ್ ಬಂಗಿ, ಮಾಯಕೊಂಡದಿಂದ ಸವಿತಾ ಮಲ್ಲೇಶ್ನಾಯಕ್, ಶ್ರೀರಂಗಪಟ್ಟಣದಿಂದ ಪಿ.ಎಚ್. ಚಂದ್ರಶೇಖರ್, ಶಿಡ್ಲಘಟ್ಟದಿಂದ ಪಿಟ್ಟು ಆಂಜನಪ್ಪ, ರಾಯಭಾಗ್ನಿಂದ ಶಂಭು ಕೋಲ್ಕರ್, ಶಿವಮೊಗ್ಗ ಗ್ರಾಮಾಂತರದಿಂದ ಬಿ.ಎಚ್. ಭೀಮಪ್ಪ, ಶಿಕಾರಿಪುರದಿಂದ ಎಸ್ಪಿ.ನಾಗರಾಜಗೌಡ, ತರೀಕೆರೆಯಿಂದ ದೋರ್ನಲ್ ಪರಮೇಶ್ವರಪ್ಪ, ಬೀದರ್ನಿಂದ ಶಶಿ ಚೌದಿ, ಔರಾದ್ನಿಂದ ಲಕ್ಷ್ಮಣ್ ಸೊರಳಿ ಹಾಗೂ ರಾಯಚೂರು ನಗರದಿಂದ ಮಜೀಬುದ್ದೀನ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಇವರು ಬಂಡಾಯವಾಗಿ ಕಣಕ್ಕಿಳಿದ ಹಿನ್ನೆಲೆ ಉಚ್ಛಾಟನೆ ಮಾಡಲಾಗಿದೆ.
ಇದನ್ನೂ ಓದಿ: ಚುನಾವಣೆಗಾಗಿ ಕಾಂಗ್ರೆಸ್ ದೇಶ ವಿರೋಧಿ ಶಕ್ತಿಗಳ ಸಹಾಯ ಪಡೆಯುತ್ತದೆ: ಮುಲ್ಕಿಯಲ್ಲಿ ಮೋದಿ ಗಂಭೀರ ಆರೋಪ