ಬೆಂಗಳೂರು : ನಗರದ ಜೆ.ಪಿ. ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಸಚಿವ ಸುಧಾಕರ್ ಅವರ 'ಏಕಪತ್ನಿವ್ರತಸ್ಥ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ರು.
ಇಲ್ಲಿ ಯಾರೂ ಸತ್ಯ ಹರಿಶ್ಚಂದ್ರರಲ್ಲ, ಎಲ್ಲರ ಮನೆಯ ದೋಸೆಯೂ ತೂತೇ.. ಭೂಮಿ ಮೇಲೆ ಜನ್ಮಿಸಿದ ಎಲ್ಲಾ ಪ್ರಾಣಿ ಹಾಗೂ ಮನು ಕುಲದ ಸಹಜ ಪ್ರಕ್ರಿಯೆ.. ಇದು ದೇವರು ಸೃಷ್ಟಿಸಿರೋ ಒಂದು ಕ್ರಿಯೆ ಅದು ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದುದ್ದು ಸಿಡಿ ವಿಚಾರದಲ್ಲಿ ಬೀದಿಗೆ ಬಂದು ಬಿದ್ದಿದೆ. ಈ ವಿಚಾರದಲ್ಲಿ ನಮ್ಮ ಹೆಸರನ್ನ ಸಚಿವ ಸುಧಾಕರ್ ಯಾಕೆ ಪ್ರಸ್ತಾಪಿಸಿದ್ರೋ ಗೊತ್ತಿಲ್ಲ ಎನ್ನುವ ಮೂಲಕ ಸುಧಾಕರ್ ಹೇಳಿಕೆಗೆ ಹೆಚ್ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಸದನ ಕಲಾಪ ಸಮಯ ವ್ಯರ್ಥದ ಬಗ್ಗೆಯೂ ಮಾತನಾಡಿದ ಕುಮಾರಸ್ವಾಮಿ, ನಾನೂ ಕೂಡಾ ಒಂದು ಸಂದರ್ಭದಲ್ಲಿ ತಪ್ಪು ಮಾಡಿದ್ದೆ. ಅದನ್ನ ಸದನದಲ್ಲೇ ಧೈರ್ಯವಾಗಿ ಒಪ್ಪಿಕೊಂಡಿದ್ದೆ. ನಾನು ಸದನದ ಕಲಾಪದಲ್ಲಿ ಭಾಗವಹಿಸದಿರಲು ಕಾರಣ ಕೂಡಾ ಇದೇ ವಿಚಾರ. ಪ್ರತಿದಿನ ಪ್ರತಿಪಕ್ಷದವರು ಕಲಾಪವನ್ನು ವ್ಯರ್ಥ ಮಾಡ್ತಿದ್ದಾರೆ. ರಾಜ್ಯದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಅದನ್ನು ಹೊರತುಪಡಿಸಿ ಬೇರೆ ಎಲ್ಲಾ ಚರ್ಚೆ ನಡೆಯುತ್ತಿದೆ ಎಂದ್ರು.
ಪ್ರತಿಪಕ್ಷದ ನಾಯಕರ ಭಾಷಣದಲ್ಲಿ ನಡೆದ ಹೆಚ್ಚು ವಿಚಾರ ಚುನಾವಣೆ ನೀವೆಲ್ಲಿ ನಿಲ್ತೀರಿ? ನಾವೆಲ್ಲಿ ನಿಲ್ತೀವಿ ಅನ್ನೋದೆ ಚರ್ಚೆಯಾಗ್ತಿದೆ. 90 ಜೊತೆ ಬಟ್ಟೆ ತೆಗೆದುಕೊಂಡ್ರಿ ಅನ್ನೋದೆ ಚರ್ಚೆ. ನಮ್ಮ ಶಾಸಕ ಎ ಟಿ ರಾಮಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸ್ತೇನೆ. ಅವ್ರು ಸರ್ಕಾರದ ಯೋಜನೆ ಕುರಿತು ಚರ್ಚೆ ಮಾಡಿದ್ರು. ಗುತ್ತಿಗೆದಾರರಿಗೆ ಬೇಕಾದ ಹಣದಲ್ಲಿ ಕಮಿಷನ್ ಬಗ್ಗೆ ಮಾತನಾಡಿದ್ರು ಅಂತಾ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಯಾರು ನುಂಗಿ ಹಾಕಿದಾರೆ ಅನ್ನೋದ್ರ ಬಗ್ಗೆ ಚರ್ಚೆ ಮಾಡಿದ್ದಾರೆ. ಆರ್ಥಿಕ ಸ್ಥಿತಿ ಬಗ್ಗೆ ಚರ್ಚೆ ಮಾಡಿದ್ದಾರೆ. ಇದ್ಯಾವ್ದೋ ಸಿಡಿ ವಿಚಾರ ತೆಗೆದುಕೊಂಡು ಚರ್ಚೆ ಮಾಡುತ್ತಿದ್ದಾರೆ ಅನ್ನೋ ಮೂಲಕ ಸದನ ಕಲಾಪ ಸಮಯ ವ್ಯರ್ಥವಾಗುತ್ತಿರುವುದರ ಬಗ್ಗೆಯೂ ಹೆಚ್ಡಿಕೆ ಬೇಸರ ಹೊರಹಾಕಿದ್ರು.