ಬೆಂಗಳೂರು: ವೈಜ್ಞಾನಿಕತೆ ಬೆಳೆದಂತೆ ಹೊಸ ತಂತ್ರಜ್ಞಾನಗಳು ಬರುತ್ತಿವೆ. ವಿಜ್ಞಾನ ಬೆಳೆಯುತ್ತಿರುವ ವೇಗದಲ್ಲಿ ಮನುಷ್ಯ ಕೂಡ ಬೆಳೆಯುತ್ತಿದ್ದಾನೆ. ನೂತನ ಕಾಲಘಟ್ಟದ ವಿಚಾರಗಳನ್ನು ತಿಳಿದುಕೊಳ್ಳುವ ಆತನ ಹುಮ್ಮಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಜವಾಹರ್‌ಲಾಲ್ ನೆಹರು ತಾರಾಲಯದ ಅಧ್ಯಕ್ಷ ಎ ಎಸ್ ಕಿರಣ್ ಕುಮಾರ್ ಹೇಳಿದರು.
ನಗರದ ಗಾಂಧಿ ಭವನದ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಾಶನ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಬಿ ಎಸ್ ಶೈಲಜಾ ಮತ್ತು ಟಿ ಆರ್ ಅನಂತರಾಮು ಸಂಪಾದಕತ್ವದ ʻಖಗೋಳ ದರ್ಶನʼ (ಅಂತರಿಕ್ಷಕ್ಕೆ ಹಂತ ಹಂತದ ಮೆಟ್ಟಿಲು) ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನವಕರ್ನಾಟಕ ಪ್ರಕಾಶನದಿಂದ ಪ್ರಕಟಗೊಂಡ ಖಗೋಳ ದರ್ಶನ ವಿಜ್ಞಾನ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆಯಲಿದೆ. ಇನ್ನು ಮನುಷ್ಯ ತನ್ನ ಕ್ಷಮತೆಗಳನ್ನು ಬೆಳೆಸಿಕೊಂಡು, ಹೊಸತನ ಬರಮಾಡಿಕೊಳ್ಳುವ ದಾರಿಯೂ ಆತನು ಬ್ರಹ್ಮಾಂಡದಲ್ಲಿ ಬರೀ ಜೀವಿ, ವಸ್ತು ಅಷ್ಟೇ ಎಂಬುವುದನ್ನು ಅರಿತುಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಹಿರಿಯ ವಿಜ್ಞಾನಿ ಹಾಗೂ ಪ್ರಾಧ್ಯಾಪಕ ಎಂ ಆರ್ ಎನ್ ಮೂರ್ತಿ ಮಾತನಾಡಿ, ಮನುಷ್ಯತ್ವ ಸಂಪಾದಿಸಿಕೊಳ್ಳಲು ಈ ಗ್ರಂಥ ಸಹಕಾರಿಯಾಗಿದೆ. ಎಲ್ಲ ದೇಶದಲ್ಲಿ ಖಗೋಳ ವಿಜ್ಞಾನ ಮೊದಲಿನಿಂದಲೂ ಇದೆ. ಕಾರಣ ಅದಿಲ್ಲದೇ ವ್ಯವಸಾಯವೂ ಸಾಧ್ಯವಿರಲಿಲ್ಲ. ಮನುಷ್ಯ ವ್ಯವಸಾಯ ಶುರು ಮಾಡಿದಾಗಲೇ ಯಾವಾಗ ಮಳೆ ಬರುತ್ತದೆ ಎನ್ನುವ ಮಾಹಿತಿ ತಿಳಿದು ಕೊಳ್ಳಬೇಕಾಯಿತು. ಅದಕ್ಕೂ ಖಗೋಳ ವಿಜ್ಞಾನ ನೆರವಾಯಿತು.
ಹೀಗೆ ಎಲ್ಲ ಕಾಲದಲ್ಲಿ ಖಗೋಳ ವಿಜ್ಞಾನ ಬೆಳೆದು ಬಂದಿದೆ. ಇನ್ನು ಈ ಕೃತಿಯು ಖಗೋಳ ವಿಜ್ಞಾನವನ್ನು ಪರಿಚಯಿಸಿದ್ದರಿಂದ ಹಿಡಿದು ವಿಜ್ಞಾನದ ಬೆಳವಣಿಗೆಗೆ ಕಾರಣರಾದ ಕುರಿತು ಮಾಹಿತಿಯನ್ನು ನೀಡುತ್ತದೆ ಎಂದು ಹೇಳಿದರು.
ಈ ಕೃತಿ ಎಲ್ಲದಕ್ಕಿಂತಲೂ ಭಿನ್ನವಾಗಿದ್ದು, ವಿಷಯದ ವ್ಯಾಪ್ತಿ, ಪುಸ್ತಕದ ಗಾತ್ರ ಅಥವಾ ತಯಾರಿಕೆಯ ವೆಚ್ಚ ದೃಷ್ಟಿಯಿಂದಲೂ ಇದೊಂದು ಮಹತ್ವದ ಗ್ರಂಥವಾಗಿ ಹೊರಹೊಮ್ಮಿದೆ. ವೈಚಾರಿಕತೆ ಹಾಗೂ ವಿಜ್ಞಾನದ ಕಡೆಗೆ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡಿದ ಕೃತಿ ಇದಾಗಿದೆ ಎಂದು ನವಕರ್ನಾಟಕ ಪ್ರಕಾಶನದ ಪ್ರಕಾಶಕ ರಮೇಶ್ ಉಡುಪ ಅಭಿಪ್ರಾಯಪಟ್ಟರು.
’’25 ವರ್ಷಗಳ ಇತ್ತೀಚಿನ ಪ್ರಗತಿಯನ್ನು ಇಲ್ಲಿ ದಾಖಲಿಸಲಾಗಿದ್ದು, ಪದ ಬಳಕೆಯು ಕೂಡ ಕೃತಿಯಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಪ್ರತಿಯೊಬ್ಬರು ಕೂಡ ಈ ಖಗೋಳ ದರ್ಶನವನ್ನು ಓದಲೇಬೇಕು ಎಂದು ‘ಖಗೋಳ ದರ್ಶನ’ ಕೃತಿಯ ಸಂಪಾದಕಿ ಬಿ ಎಸ್ ಶೈಲಜಾ ಸಲಹೆ ನೀಡಿದರು.
ಕೃತಿಯ ಸಂಪಾದಕ ಟಿ ಆರ್ ಅನಂತರಾಮು ಮಾತನಾಡಿ, ನವಕರ್ನಾಟಕ ಸಂಸ್ಥೆಯು ವಿಜ್ಞಾನ ಸಾಹಿತ್ಯಕ್ಕಾಗಿ 2,000 ಕೃತಿಗಳನ್ನು ಮುದ್ರಿಸಿದೆ. ಕರ್ನಾಟಕದ ಯಾವುದೇ ಸಂಸ್ಥೆ ಕೂಡ ಈ ರೀತಿಯ ಸಾಧನೆ ಮಾಡಿಲ್ಲ. ಇನ್ನು ವಿಜ್ಞಾನ ಸಾಹಿತ್ಯವನ್ನು ವಿಭಿನ್ನವಾದ ಪ್ರಕಾರವಾಗಿದ್ದು, ಜನಗಳಿಗೆ ಬೇಕಾಗಿರುವ, ಅರ್ಥವಾಗುವ ಭಾಷೆಯಲ್ಲಿ ವಿಜ್ಞಾನದ ವಿಚಾರಗಳನ್ನು ನೀಡಿದರೆ ಅವರು ಖಂಡಿತವಾಗಿಯೂ ಸ್ವೀಕರಿಸುತ್ತಾರೆ.
ವಿಜ್ಞಾನ ಲೇಖಕರು ಸಾಹಿತ್ಯ ಹಾಗೂ ವಿಜ್ಞಾನವನ್ನು ಬೆಸೆಯುವ ಕೊಂಡಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಬರಹದ ಜೊತೆಗೆ ಕುತೂಹಲವನ್ನು ಹುಟ್ಟಿಸುವಂತ ಗುಣಮಟ್ಟದ ಚಿತ್ರಗಳನ್ನು ಕೃತಿಯಲ್ಲಿ ನೀಡುತ್ತಾರೆ. ಇವೆಲ್ಲವನ್ನೂ ನಾವು ಖಗೋಳ ಶಾಸ್ತ್ರ ಕೃತಿಯಲ್ಲಿ ಕಾಣಬಹುದು. ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಪದಬಳಕೆಯನ್ನು ಮಾಡಲಾಗಿದೆ. ಅಷ್ಟೇ ಅಲ್ಲದೇ ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಎಲ್ಲಾ ವರ್ಗದವರು ಓದಬಹುದು ಎಂದು ಹೇಳಿದರು.
ಇದನ್ನೂಓದಿ: ಈ ವರ್ಷ ವಿಶ್ವ ಪ್ರಸಿದ್ದ ಮೈಸೂರು ದಸರಾ ಅದ್ದೂರಿ ಆಚರಣೆ: ಸಚಿವ ಮಹಾದೇವಪ್ಪ