ಬೆಂಗಳೂರು: ಇಲ್ಲಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಡನಿಲ್ಲದೆ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆಗೆ ವನಿತ ಸಹಾಯವಾಣಿ ನೆರವು ನೀಡಿತ್ತು. ಈ ಕುರಿತಂತೆ ನಮ್ಮ 'ಈಟಿವಿ ಭಾರತ' ಬಿತ್ತರಿಸಿದ್ದ ವರದಿಗೆ ಸಂಸ್ಥೆ ಸ್ಪಂದಿಸಿ ಮಹಿಳೆಯ ಬದುಕಿಗೆ ಆಸರೆಯಾದ ಸಂಸ್ಥೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾಗ್ಯ ಎನ್ನುವ ಮಹಿಳೆ ತನ್ನ ಗಂಡನ ಜೊತೆ ಸುಖ ಜೀವನ ನಡೆಸುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಕೂಡ ಜನಿಸಿದೆ. ಆದರೆ ಗಂಡನಾದವನು ಸಂಸಾರ ಮಾಡುವುದನ್ನು ಬಿಟ್ಟು ಭಾಗ್ಯ ಅವರನ್ನು ಬಿಟ್ಟು ಬೇರೆ ಮದುವೆಯಾಗಿ ಸಂಸಾರ ನಡೆಸಲು ಶುರು ಮಾಡಿದ್ದ. ಗಂಡ ಬಿಟ್ಟು ಹೋದ ನಂತರ ಕುಟುಂಬವನ್ನು ನಡೆಸುವುದು ಮಹಿಳೆಗೆ ತುಂಬಾನೇ ದುಸ್ತರವಾಗಿತ್ತು.
ಈ ಸಂಬಂಧ ಭಾಗ್ಯ ಅವರು ವನಿತ ಸಹಾಯವಾಣಿ ಕೇಂದ್ರಕ್ಕೆ ತೆರಳಿ ನೆರವಿಗೆ ಅಂಗಲಾಚಿದ್ದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಅವರಿಗೆ ಹೊಲಿಗೆ ಯಂತ್ರ ನೀಡಿ ಸಹಾಯ ಮಾಡಿದ್ದರು. ಈ ಕುರಿತಂತೆ ಈಟಿವಿ ಭಾರತ 'ಸಂಸಾರದಲ್ಲಿ ಗಂಡ ಕೈ ಕೊಟ್ಟರೂ ಕಷ್ಟ ಕಾಲದಲ್ಲಿ ಕೈ ಹಿಡಿದ ವನಿತಾ ಸಹಾಯವಾಣಿ!' ಎಂಬ ಅಡಿಬರಹದಲ್ಲಿ ಸುದ್ದಿ ಪ್ರಕಟಿಸಿತ್ತು. ಸುದ್ದಿ ನೋಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ನವದೆಹಲಿಯ ಸಹಾಯವಾಣಿ ಅಧಿಕಾರಿಗಳು ಸೇರಿದಂತೆ ಹಲವರು, ಮಹಿಳಾ ಸಹಾಯವಾಣಿ ಮಾಡಿದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರಂತೆ.
ಸಂಸಾರದಲ್ಲಿ ಗಂಡ ಕೈ ಕೊಟ್ಟರೂ ಕಷ್ಟ ಕಾಲದಲ್ಲಿ ಕೈ ಹಿಡಿದ ವನಿತಾ ಸಹಾಯವಾಣಿ!
ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿದ ವನಿತ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ಅವರು, ನಮ್ಮ ಸಂಸ್ಥೆ ಇರುವುದೇ ಮಹಿಳೆಯರ ಸಮಸ್ಯೆಗೆ ಸ್ಪಂದಿಸಲು. ಕೌಟುಂಬಿಕ ಸಮಸ್ಯೆ, ಲೈಗಿಂಕ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರಿಗೆ ಸಹಾಯ ಮಾಡುವುದೇ ನಮ್ಮ ಕರ್ತವ್ಯ. ಕೊರೊನಾ ಇರುವ ಹಿನ್ನೆಲೆಯಲ್ಲಿ ಅತೀ ಬಡತನದಿಂದ ಬಳಲುತ್ತಿರುವವರನ್ನು ಆಯ್ಕೆ ಮಾಡಿ ಅವರು ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದೇವೆ. ಈ ಉದ್ದೇಶದಿಂದ ಭಾಗ್ಯ ಅವರಿಗೆ, ಗೀತಾ ವೆಲ್ಲಪಲ್ಲಿ ಎಂಬುವರಿಂದ ಟ್ರೈನಿಂಗ್ ಕೊಟ್ಟು ಮಾಸ್ಕ್ ತಯಾರಿಸುವ ಕೆಲಸ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ನಾವು ಮಾಡಿದ ಈ ಕಾರ್ಯಕ್ಕೆ ನೀವೇ ಸ್ಫೂರ್ತಿ. ನಮ್ಮ ಈ ಅಳಿಲು ಸೇವೆಯ ಬಗ್ಗೆ 'ಈಟಿವಿ ಭಾರತ' ಬಿತ್ತರಿಸಿದ್ದರಿಂದಲೇ ಆ ನೊಂದ ಮಹಿಳೆಗೆ ಸಹಾಯ ಮಾಡಲು ನೆರವಾಯಿತು ಎಂದು ರಾಣಿ ಶೆಟ್ಟಿ ಅವರು ಈಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.