ಬೆಂಗಳೂರು: ಇಡೀ ರಾಜ್ಯದಲ್ಲಿ ಕರ್ಫ್ಯೂನೂ ಇಲ್ಲ. ಸುಡುಗಾಡುನೂ ಇಲ್ಲ. ಕೋವಿಡ್ ಪ್ರಕರಣ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿರ್ಬಂಧ ಸಡಲಿಸಲು ಸಿಎಂಗೆ ಮನವಿ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ರಾತ್ರಿ ಕರ್ಫ್ಯೂ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡೀ ಕರ್ನಾಟಕದಲ್ಲಿ ಕರ್ಫ್ಯೂ ಇಲ್ಲ. ರಾತ್ರಿ ಕರ್ಫ್ಯೂ ಇಲ್ಲ, ಸುಡುಗಾಡು ಇಲ್ಲ. ಯಾವ ಜಿಲ್ಲೆಗಳಲ್ಲಿ ಕೊರೊನಾ ಪ್ರಮಾಣ ಹೆಚ್ಚಾಗಿದೆಯೋ ಅಲ್ಲಿ ಮಾತ್ರ ಬಿಗಿ ಕ್ರಮ ಕೈಗೊಳ್ಳಲಿ. ಯಾವ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಕಡಿಮೆ ಇದೆಯೋ ಅಲ್ಲಿನ ಪರಿಸ್ಥಿತಿಗನುಗುಣವಾಗಿ ಕ್ರಮ ಕೈಗೊಳ್ಳುವಂತೆ ಸಿಎಂರಲ್ಲಿ ಮನವಿ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ಒಂದೇ ರೂಲ್ ಇದೆ ಅಂತಾ ಯಾರು ಹೇಳಿದ್ದಾರೆ. ಯಾವ ಕರ್ಫ್ಯೂ ಇಲ್ಲ, ಏನೂ ಇಲ್ಲ. ನಮ್ಮ ಶಿವಮೊಗ್ಗದಲ್ಲಿ ಯಾವ ಕರ್ಫ್ಯೂನೂ ಇಲ್ಲ. ಜಿಲ್ಲೆಗಳಿಗೆ ಇನ್ನೂ ಆ ಆದೇಶ ಬಂದಿಲ್ಲ. ಈ ಬಗ್ಗೆ ನಾನು ಬೇಸರ ಮಾಡಿಕೊಂಡಿಲ್ಲ. ಜನರ ಭಾವನೆಗಳನ್ನ ವ್ಯಕ್ತಪಡಿಸಿದ್ದೇನೆ ಅಷ್ಟೇ. ಬೆಂಗಳೂರಿನಲ್ಲಿ ಬಿಗಿ ಮಾಡೋದು ಮಾಡಿ. ಬೇರೆ ಜಿಲ್ಲೆಗಳಲ್ಲಿ ಮಾಡುವುದು ಬೇಡ. ಇದನ್ನೇ ಸಿಎಂ ಜೊತೆ ನಾನು ಮಾತನಾಡ್ತೇನೆ. ಸಂಪುಟ ಸಭೆಯಲ್ಲಿ ನಾನು ಮಾತನಾಡ್ತೇನೆ ಎಂದು ಕರ್ಫ್ಯೂ ಜಾರಿ ಬಗ್ಗೆ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಲಾಕ್ ಡೌನ್ ಸಂಬಂಧ ಸರ್ಕಾರದಲ್ಲೇ ಗೊಂದಲ ವಿಚಾರವಾಗಿ ಮಾತನಾಡಿದ ಸಚಿವ ಈಶ್ವರಪ್ಪ, ಎಲ್ಲಾ ವಿಚಾರವನ್ನ ಸಂಪೂರ್ಣವಾಗಿ ಸಂಪುಟ ಸಭೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಇಲ್ಲ. ಕಡಿಮೆ ಇರುವ ಕಡೆ ನಿರ್ಬಂಧ ಸಡಿಲಿಸಬೇಕು. ಇದನ್ನ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇನೆ ಎಂದರು.
ಬಿಎಸ್ವೈ, ಸಿದ್ದರಾಮಯ್ಯ, ದೇವೇಗೌಡ ರಾಜ್ಯದ ಆಸ್ತಿ.. ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷ ಬದುಕಿದೆ ಅನ್ನೋದನ್ನು ತೋರಿಸಲು ಹೀಗೆ ಮಾಡುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಆರೋಗ್ಯವಂತರಾಗಿರಬೇಕು ಅನ್ನೋದು ನಮ್ಮ ಆಶಯ. ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಇವರೆಲ್ಲ ನಮ್ಮ ರಾಜ್ಯದ ಆಸ್ತಿ ಎಂದು ತಿಳಿಸಿದರು.
ರಾಜಕಾರಣದ ನೆಪದಲ್ಲಿ ಆರೋಗ್ಯ ಕೆಡಿಸಿಕೊಳ್ಳಬಾರದು. ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಅದಕ್ಕಾಗಿ ಪಾದಯಾತ್ರೆ ಮಾಡಬೇಡಿ ಅಂತಾ ಮನವಿ ಮಾಡುತ್ತಿದ್ದೇವೆ. ಆದರೆ, ಅದನ್ನು ಮಾಡೇ ಮಾಡುತ್ತೇವೆ ಅಂತಾ ಹಠಕ್ಕೆ ಬಿದ್ದರೆ ನಾವು ಏನು ಮಾಡಲು ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗುಜರಾತ್ ಮಾದರಿ ಸಂಪುಟ ಪುನಾರಚನೆ ಬಗ್ಗೆ ಪ್ರತಿಕ್ರಿಯೆ: ಈ ಕುರಿತ ಒತ್ತಾಯದ ವಿಚಾರವಾಗಿ ಮಾತನಾಡಿದ ಈಶ್ವರ, ನಮ್ಮ ಪಕ್ಷದಲ್ಲಿ ಯಾರು ಏನು ಅಭಿಪ್ರಾಯ ಬೇಕಾದರೂ ಹೇಳಲು ಅವಕಾಶ ಇದೆ. ಈ ಬಗ್ಗೆ ಸಿಎಂ ಹಾಗೂ ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಂಪುಟ ಬದಲಾವಣೆ ಆಗಬೇಕೋ ಬೇಡವೋ ಎಂಬುದನ್ನ ಕೇಂದ್ರದ ನಾಯಕರೇ ತೀರ್ಮಾನಿಸುತ್ತಾರೆ. ರೇಣುಕಾಚಾರ್ಯ ಗುಜರಾತ್ ಮಾದರಿಯಲ್ಲಿ ಸಂಪುಟ ಪುನಾರಚನೆ ಆಗಬೇಕು ಅಂತಾ ಹೇಳಿದ್ದಾರೆ. ಅದರ ಜೊತೆಗೆ ಕೇಂದ್ರದ ನಾಯಕರ ತೀರ್ಮಾನಕ್ಕೂ ಬದ್ಧ ಅಂತಾನೂ ರೇಣುಕಾಚಾರ್ಯ ಹೇಳಿದ್ದಾರೆ ಎಂದರು.
ಪಂಜಾಬ್ ಘಟನೆ ಪ್ರಜಾಪ್ರಭುತ್ವಕ್ಕೆ ಮಾರಕ: ಪಂಜಾಬ್ನಲ್ಲಿ ಪ್ರಧಾನಿಗೆ ಭದ್ರತಾ ಲೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಪಂಜಾಬ್ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಕ್ಷಮೆ ಕೋರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಘಟನೆ ಪ್ರಜಾಪ್ರಭುತ್ವಕ್ಕೆ ಮಾರಕ. ದೇಶದ ಪ್ರಧಾನಿಗಳಿಗೆ ಈ ರೀತಿ ಅವಮಾನ ಮಾಡುವುದು ಸರಿಯಲ್ಲ. ಇಂದಿರಾ ಗಾಂಧಿಯವರು ಪಾಕಿಸ್ತಾನ ವಿರುದ್ಧ ಯುದ್ಧ ಘೋಷಿಸಿದಾಗ ಅಟಲ್ ಬಿಹಾರಿ ವಾಜಪೇಯಿ ಕೊಂಡಾಡಿದ್ದರು. ಅವರು ನಮ್ಮ ನಾಯಕಿ, ದುರ್ಗಿ ಅಂತಾ ಬಣ್ಣಿಸಿದ್ದರು ಎಂದು ಸ್ಮರಿಸಿದರು.
ಈಗಿನ ಕಾಂಗ್ರೆಸ್ನವರು ನಮ್ಮ ಪ್ರಧಾನಿಯವರನ್ನ ಅಪಮಾನ ಮಾಡಿ ಹೊರಗಡೆ ಕಳುಹಿಸಿರೋದು ನಾಚಿಕೆಗೇಡಿನ ವಿಚಾರ. ಎಐಸಿಸಿ ಈ ಸಂಬಂಧ ಕ್ಷಮೆ ಕೋರಬೇಕು. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಲು ಎಐಸಿಸಿ ಮುಂದಾಗಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
ವಿಧಾಮಸೌಧದಲ್ಲಿ ಸಚಿವ ನಿರಾಣಿ ಮತ್ತು ತಾವು ಭೇಟಿ ಮಾಡಿದ ವಿಚಾರವಾಗಿ ಸ್ಪಷ್ಟನೆ ನೀಡಿ, ನಾವು ಶಿವಮೊಗ್ಗದ ವಿದ್ಯುತ್ ವಿಚಾರದ ಚರ್ಚೆ ಮಾಡಿದ್ದೆವು. ಇದರಲ್ಲಿ ಬೇರೆ ಏನೂ ಇಲ್ಲ. ಈಗ ಸುನೀಲ್ ಕುಮಾರ್ ಬಂದಿದ್ದಾರೆ. ಅವರ ಜೊತೆಯೂ ಮಾತನಾಡುತ್ತೇನೆ ಎಂದು ಹೇಳಿದರು.