ಬೆಂಗಳೂರು: ಅಪ್ಪನ ಮನೆಗೆ ಮಗ ಹೋಗುವುದು ತಪ್ಪಲ್ಲ, ಇನ್ಮೇಲೆ ಯಾವಾಗಲೂ ದೇವೇಗೌಡರ ಮನೆಯಲ್ಲಿಯೇ ಕುಮಾರಸ್ವಾಮಿ ಇರಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅಪ್ಪನ ಮನೆಗೆ ಮಗ ಹೋಗುವುದು ತಪ್ಪು ಅಂತ ಹೇಳುವುದು ಯಾವ ನ್ಯಾಯ? ದೇವೇಗೌಡರ ಮನೆಗೆ ಕುಮಾರಸ್ವಾಮಿ ಹೋಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸರಿಯಲ್ಲ. ಅಪ್ಪ ಮಕ್ಕಳನ್ನು ಬೇರೆ ಮಾಡಬೇಡಿ ಇನ್ಮೇಲೆ ಯಾವಾಗಲೂ ದೇವೇಗೌಡರ ಮನೆಯಲ್ಲಿಯೇ ಕುಮಾರಸ್ವಾಮಿ ಇರಲಿದ್ದಾರೆ ಎಂದು ಟೀಕಿಸಿದರು.
ವಿಧಾನಸಭೆ ಅಧಿವೇಶನ ನಡೆಯುವುದಿಲ್ಲ, ನಿಮ್ಮ ಶಾಸಕರು ಮೈತ್ರಿ ಸರ್ಕಾರದ ಬಗ್ಗೆ ಅಸಮಧಾನದಲ್ಲಿದ್ದಾರೆ. ಅವರು ರಾಜೀನಾಮೆ ಕೊಡುತ್ತಾರೆ. ಹಾಗಾಗಿ ಈಗಲೇ ರಾಜೀನಾಮೆ ಕೊಡಿ ಎಂದಿದ್ದೆ. ಆದರೆ ಸಿಎಂ ಕೇಳಲಿಲ್ಲ. ಈಗ ಅಪಮಾನ ಮಾಡಿಕೊಂಡು ರಾಜೀನಾಮೆ ಕೊಡುವ ಸ್ಥಿತಿಗೆ ಬಂದಿದ್ದಾರೆ. ಇನ್ನು ಎಷ್ಟು ಅಪಮಾನ ಮಾಡಿಕೊಳ್ಳಬೇಕು ಅಂತ ಇದ್ದೀರಾ ಎಂದು ನನಗೆ ಗೊತ್ತಿಲ್ಲ. ಎಲ್ಲದಕ್ಕೂ ಕೂಡ ಒಂದು ಮಿತಿ ಇರಬೇಕು ಸಿಎಂಗೆ ಕಾಲೆಳೆದರು.
ಎಷ್ಟು ಬೇಕು ಅಷ್ಟು ಹಣ ಮಾಡಿಕೊಂಡು ಆನಂತರ ರಾಜೀನಾಮೆ ಕೊಡಬೇಕು ಎಂದರೆ ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ. ಎಲ್ಲಾ ಇಲಾಖೆಗಳಲ್ಲೂ ಕಡತಗಳ ವಿಲೇವಾರಿ ಮಾಡಲಾಗುತ್ತಿದೆ. ಲೂಟಿ ಮಾಡಲು ರಿಲೇ ಓಟದಲ್ಲಿ ಓಡುವಂತೆ ಹೋಗುತ್ತಿದ್ದಾರೆ. ಮುಳುಗುತ್ತಿರುವ ಹಡಗು ಎನ್ನುವ ಕಾರಣಕ್ಕೆ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿದ್ದಾರೆ. ಮುಂದೆ ಇದೆಲ್ಲಾ ಹೊರಗಡೆ ಬರಲಿದೆ ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.