ಬೆಂಗಳೂರು: ಕಾರಾಗೃಹದ ಕೈಮಗ್ಗ ಘಟಕದಲ್ಲಿ ಸಿದ್ಧಪಡಿಸುವ ಸಮವಸ್ತ್ರಗಳನ್ನು ಸರ್ಕಾರಿ ಶಾಲೆಗಳಿಗೆ ವಿತರಿಸಲು ಜೈಲು ಪ್ರಾಧಿಕಾರದೊಂದಿಗೆ ಬೆಂಗಳೂರು ವಕೀಲರ ಸಂಘ ಕೈ ಜೋಡಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಕರೆ ನೀಡಿದ್ದಾರೆ.
ಸೋಮವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜೈಲಿನ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು. ಬಳಿಕ ನೂತನವಾಗಿ ನಿರ್ಮಿಸಿರುವ 'ಅಡಕೆ ಎಲೆ ಉತ್ಪನ್ನಗಳ ಉತ್ಪಾದನಾ ಘಟಕ'ಕ್ಕೆ ನ್ಯಾ. ಪಿ ಬಿ ವರಾಳೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೈಲಿನಲ್ಲಿ ಕೈದಿಗಳು ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಸಿದ್ದಪಡಿಸುತ್ತಿದ್ದಾರೆ. ಈ ಬಟ್ಟೆಗಳು ಶಾಲಾ ಮಕ್ಕಳಿಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು.
ಪರಿಸರ ರಕ್ಷಿಸುವುದು ನಮ್ಮ ಕರ್ತವ್ಯ: ಪರಿಸರ ಸ್ನೇಹಿ ವಸ್ತುಗಳ ಬಳಕೆ ಉತ್ತೇಜಿಸುವುದು ಮತ್ತು ಪ್ಲಾಸ್ಟಿಕ್ ಅನ್ನು ನಿಷೇಧಿಸುವುದು ಉತ್ತಮ ಹೆಜ್ಜೆ. ಪರಿಸರ ನಮ್ಮ ತಾಯಿ ಇದ್ದಂತೆ. ಪರಿಸರವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಿಸಬೇಕು. ಉತ್ತಮ ಭವಿಷ್ಯಕ್ಕಾಗಿ ಹೆಚ್ಚು ಹೆಚ್ಚು ಸಸಿಗಳನ್ನು ನೆಡಬೇಕು ಎಂದು ಕರೆ ನೀಡಿದರು.
ಬಳಿಕ ಕಾರಾಗೃಹದ ಮರೆಗೆಲಸ, ಕೈಮಗ್ಗ ಮತ್ತು ಬೇಕರಿ ಘಟಕ ಹಾಗೂ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು, ಜೈಲಿನ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಯ್ದುಕೊಳ್ಳಬೇಕು. ಜೈಲಿನಲ್ಲಿ ಕಲಿತ ಕೌಶಲ್ಯಗಳನ್ನು ತಮ್ಮ ಮುಂದಿನ ಜೀವನದಲ್ಲಿ ಬಳಸಿಕೊಳ್ಳುವಂತೆ ಕೈದಿಗಳಿಗೆ ಸಲಹೆ ನೀಡಿದರು.
ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರು, ಜೈಲು ಗ್ರ್ರಂಥಾಲಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವಿವಿಧ ಕ್ಷೇತ್ರಗಳಲ್ಲಿ ತಮ್ಮ ತಂತ್ರಜ್ಞಾನ ಹೆಚ್ಚಿಸಿಕೊಂಡು ಅಪರಾಧ ಮಾಡುವುದನ್ನು ತಪ್ಪಿಸಬೇಕು ಎಂದು ಕೈದಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಮನೀಶ್ ಕರ್ಬಿಕರ್, ಹೈಕೊರ್ಟ್ ರಿಜಿಸ್ಟ್ರಾರ್ ಕೆ.ಎಸ್ಭರತ್ ಕುಮಾರ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ ರವಿ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈ ಶಂಕರ್, ಕಾರಾಗೃಹ ಇಲಾಖೆ ಡಿಐಜಿ ಸೋಮೇಶೇರ್, ಎಐಜಿ ಆನಂದ್ ರೆಡ್ಡಿ, ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್ ರಮೇಶ್, ಅಧೀಕ್ಷಕ ಡಾ.ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್: ಗ್ರಾಮ ಪಂಚಾಯಿತಿಗಳು ಸ್ಥಳೀಯವಾಗಿ ಆಸ್ತಿ ತೆರಿಗೆ ವಿಧಿಸುವ ನಿಟ್ಟಿನಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಕಲಂ 44ಕ್ಕೆ ತರಲಾಗಿರುವ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಮಾರತ್ತಹಳ್ಳಿಯ ಪ್ರಿಯಾ ಸುಂದರೇಶನ್ ಸೇರಿದಂತೆ ಒಟ್ಟು ಆರು ಜನರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆನೇಕಲ್ ತಾಲೂಕು ಗ್ರಾಮ ಪಂಚಾಯಿತಿ ಸಿಇಒ ಸೇರಿದಂತೆ ಒಟ್ಟು ಆರು ಜನ ಪ್ರತಿವಾದಿಗಳು ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ. ಅಲ್ಲದೇ ಆನೇಕಲ್ ತಾಲೂಕು ಗ್ರಾಮ ಪಂಚಾಯಿತಿ ಸಿಇಒ,2015-16ರ ಮೌಲ್ಯಮಾಪನದ ಅನುಸಾರ ಹೊಸ ತೆರಿಗೆಗೆ ಮುಂದಾದಲ್ಲಿ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನಿರ್ದೇಶನ ನೀಡಿ ಆದೇಶಿಸಿದೆ.
ಅರ್ಜಿದಾರರ ವಾದವೇನು: ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹಿಸಲು ನೀಡಲಾಗಿರುವ ಅಧಿಕಾರ ನ್ಯಾಯಯುತವಾಗಿಲ್ಲ. ಬೆಂಗಳೂರು ಮಹಾನಗರದ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಗಳು ಖಾಲಿ ನಿವೇಶನಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ಮತ್ತು ಶುಲ್ಕವು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಖಾಸಗಿ ನಿವೇಶನಗಳಿಗೆ ವಿಧಿಸಲಾಗುತ್ತಿರುವ ತೆರಿಗೆಗಿಂತಲೂ ಹತ್ತು ಪಟ್ಟು ಹೆಚ್ಚಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಕಲಂ 44ಕ್ಕೆ ತರಲಾಗಿರುವ ತಿದ್ದುಪಡಿ ಅಸಾಂವಿಧಾನಿಕವಾಗಿದೆ. ಈ ನಿಟ್ಟಿನಲ್ಲಿ 2016ರ ನವೆಂಬರ್ 19ರಂದು ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸಬೇಕು. ಅಂತೆಯೇ, ಈ ದಿಸೆಯಲ್ಲಿ ಗ್ರಾಮ ಪಂಚಾಯತ್ ತೆರಿಗೆ ಮತ್ತು ಶುಲ್ಕಕ್ಕೆ ಸಂಬಂಧಿಸಿದಂತೆ 2020ರ ಅಕ್ಟೋಬರ್ 27ರಂದು ಕೈಗೊಳ್ಳಲಾಗಿರುವ ನಿರ್ಣಯ ಏಕ ಪಕ್ಷೀಯವಾಗಿದೆ. ಆದ್ದರಿಂದ, ಈ ತಿದ್ದುಪಡಿ ವಜಾಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ: ತಡೆಯಾಜ್ಞೆ ನಡುವೆಯೂ ಗೇಮ್ಸ್ ಕ್ರಾಫ್ಟ್ ಕಂಪೆನಿಗೆ ನೋಟಿಸ್ ಜಾರಿ : ನೋಟಿಸ್ ರದ್ದು ಮಾಡಿದ ಹೈಕೋರ್ಟ್