ಬೆಂಗಳೂರು: ಬೆಂಗಳೂರು ನಗರ ಮತ್ತು ಹೊರವಲಯದಲ್ಲಿನ ಖಾಸಗಿ ಶಾಲೆಗಳಿಗೆ ಏಪ್ರಿಲ್ 8 ರಂದು ಬಾಂಬ್ ಸ್ಫೋಟದ ಬೆದರಿಕೆಯೊಡ್ಡಿ ಇಮೇಲ್ ಬಂದಿತ್ತು. ಈ ಘಟನೆಗೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿ ನೀಡಿದ್ದ ದೂರು ಆಧರಿಸಿ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲೂ ಯಲಹಂಕ ಬಳಿಯ ಸ್ಟೋನ್‌ಹಿಲ್ ಶಾಲೆಗೆ ಬಂದಿದ್ದ ಇಮೇಲ್‌ಗೆ ಸಂಬಂಧಿಸಿದಂತೆ ಏಪ್ರಿಲ್ 9ರಂದು ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಐಟಿ ಆ್ಯಕ್ಟ್ 66F ಅಡಿ ಪ್ರಕರಣ ದಾಖಲಿಸಲಾಗಿದೆ.
ಐಟಿ ಆ್ಯಕ್ಟ್, 66F ಅಂದ್ರೆ ಕಂಪ್ಯೂಟರ್ ಮೂಲಕ ರಾಷ್ಟ್ರೀಯ ಏಕತೆ, ಭದ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡುವುದು ಅಥವಾ ಜನರಲ್ಲಿ ಭಯ ಉಂಟುಮಾಡುವ ಕೃತ್ಯ ಮಾಡುವುದಕ್ಕೆ ಸಂಬಂಧಿಸಿ ಇರುವ ಕಾನೂನು. ಇದನ್ನೇ ಸೈಬರ್ ಟೆರರಿಸಂ ಅಂತ ಹೇಳೋದು. ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಸೈಬರ್ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ.
ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬೆದರಿಕೆ ಒಡ್ಡಲು 10ಕ್ಕೂ ಅಧಿಕ ಇಮೇಲ್‌ಗಳನ್ನು ಸೃಷ್ಟಿ ಮಾಡಲಾಗಿದೆ. ಇದಕ್ಕಾಗಿ 10ಕ್ಕೂ ಹೆಚ್ಚು ಪ್ರಾಕ್ಸಿ ಸರ್ವರ್ ಬಳಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಶಾಲೆಯ ಆಡಳಿತ ಮಂಡಳಿಗೆ ಬಂದಿರುವ ಇಮೇಲ್‌ನ ಐಪಿ ಅಡ್ರೆಸ್ ಇನ್ನೂ ಪತ್ತೆಯಾಗಿಲ್ಲ. ಇದಕ್ಕೆ ಕಾರಣ ಪ್ರಾಕ್ಸಿ ಸರ್ವರ್ ಹಲವಾರು ಲೇಯರ್‌ಗಳನ್ನು ಒಳಗೊಂಡಿರುವುದೇ ಆಗಿದೆ. ಹಾಗಾಗಿ ಒಂದು ಸರ್ವರ್‌ನಿಂದ ಮತ್ತೊಂದು ಸರ್ವರ್‌ಗೆ ಇರುವ ಸಂಪರ್ಕ ಪತ್ತೆ ಹಚ್ಚಲು ಸಾಧ್ಯವಾಗ್ತಿಲ್ಲ. ಪೊಲೀಸರು ರಿವರ್ಸ್ ಮೋಡ್‌ನಲ್ಲಿ ಒಂದು ಸರ್ವರ್‌ನಿಂದ ಮತ್ತೊಂದು ಸರ್ವರ್‌ಗೆ ಇರುವ ಸಂಪರ್ಕ ಪತ್ತೆ ಹಚ್ಚಲು ಗೂಗಲ್ ಸಂಸ್ಥೆಗೆ ಪತ್ರ ಬರೆದಿದ್ದಾರೆ.
ಇದನ್ನೂಓದಿ: ಬೆಂಗಳೂರಿನ ಶಾಲೆಗಳಿಗೆ ಬಂದಿದ್ದು ಹುಸಿ ಬಾಂಬ್ ಬೆದರಿಕೆ: ಪೋಷಕರ ನಿಟ್ಟುಸಿರು
ಈಶಾನ್ಯ ಸೆನ್ ಠಾಣೆಯಲ್ಲಿ ಐಟಿ ಆ್ಯಕ್ಟ್ 66Fರಲ್ಲಿ ಪ್ರಕರಣ ದಾಖಲಾಗಿದ್ದು, ಮಾಡಿರುವುದರಿಂದ ಗೂಗಲ್ ಸಂಸ್ಥೆಯೂ ಗಂಭೀರವಾಗಿ ಪ್ರತಿಕ್ರಿಯೆ ನೀಡ್ತಿದೆ. ಇದೇ ವೇಗದಲ್ಲಿ ತನಿಖೆ ಮುಂದುವರೆದರೆ ಇನ್ನೇನು ಕೆಲವೇ ದಿನಗಳಲ್ಲಿ ಇಮೇಲ್‌ನ ಮೂಲ ಪತ್ತೆಯಾಗಲಿದೆ.