ದೊಡ್ಡಬಳ್ಳಾಪುರ: ವಿದ್ಯುತ್ ಲೈನ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಹರಿದು ಲೈನ್ಮ್ಯಾನ್ ಕಂಬದಲ್ಲಿಯೇ ಪ್ರಾಣ ಬಿಟ್ಟಿರುವ ದುರ್ಘಟನೆ ತಾಲೂಕಿನ ದೊಡ್ಡ ಬೆಳವಂಗಲದ ನೆರಳಘಟ್ಟ ಗ್ರಾಮದಲ್ಲಿ ನಡೆದಿದೆ.
ಬೆಸ್ಕಾಂ ನೌಕರ ಪುನೀತ್ (23) ವಿದ್ಯುತ್ ಸ್ವರ್ಶಿಸಿ ಸಾವನ್ನಪ್ಪಿರುವ ಲೈನ್ಮ್ಯಾನ್. ಕಳೆದೊಂದು ವಾರದಿಂದ ದೊಡ್ಡಬಳ್ಳಾಪುರ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿತ್ತು. ವಿದ್ಯುತ್ ಲೈನ್ ಮೇಲೆ ಮರಗಳು ಬಿದ್ದಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿತ್ತು. ವಿದ್ಯುತ್ ಲೈನ್ ದುರಸ್ತಿ ಮಾಡಲು ಬೆಸ್ಕಾಂ ಸಿಬ್ಬಂದಿ ಜೊತೆ ಪುನೀತ್ ಸಹ ಹೋಗಿದ್ದ. ಈ ವೇಳೆ ದುರ್ಘಟನೆ ಸಂಭವಿಸಿದೆ.
ವಿದ್ಯುತ್ ಲೈನ್ ದುರಸ್ತಿಗಾಗಿ ಪುನೀತ್ ಹತ್ತಿದ್ದ ಕಂಬದಲ್ಲಿ ಮೂರು ಪ್ರತ್ಯೇಕ ಲೈನ್ಗಳಲ್ಲಿ ವಿದ್ಯುತ್ ಹರಿಯುತ್ತಿತ್ತು. ಕೇವಲ ಒಂದು ಲೈನ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬೆಸ್ಕಾಂ ಸಿಬ್ಬಂದಿ ಪುನೀತ್ ಗೆ ಕಂಬ ಹತ್ತುವಂತೆ ಹೇಳಿದ್ದರು ಎನ್ನಲಾಗ್ತಿದೆ. ವಿದ್ಯುತ್ ಲೈನ್ ದುರಸ್ತಿ ಮಾಡುವ ವೇಳೆ ಎರಡು ಲೈನ್ಗಳಲ್ಲಿ ಹರಿಯುತ್ತಿದ್ದ ಪವರ್ ಸ್ವರ್ಶಿಸಿ ಪುನೀತ್ ಕಂಬದ ಮೇಲೆಯೇ ಸಾವನ್ನಪ್ಪಿದ್ದಾನೆ.
ಸದ್ಯ ಮೃತನ ಸಂಬಂಧಿಕರು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಪುನೀತ್ ಸಾವನ್ನಪ್ಪಿದ್ದಾನೆಂದು ಆರೋಪಿಸಿದ್ದಾರೆ. ಈ ಕುರಿತು ದೊಡ್ಡಬೆಳವಂಗಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.