ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ದರ ಹೆಚ್ಚಳದಿಂದಾಗಿ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರುತ್ತಿರುವ ಹಿನ್ನೆಲೆ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಲು ಪ್ರೇರೇಪಿಸುವ ಉದ್ದೇಶದಿಂದ ನಗರದ ಅರಮನೆ ಮೈದಾನದಲ್ಲಿ ನಡೆದ ಮೂರು ದಿನಗಳ ವಿದ್ಯುತ್ ಚಾಲಿತ ವಾಹನಗಳ ಪ್ರದರ್ಶನ ಇಂದು ವಿದ್ಯುಕ್ತವಾಗಿ ಮುಕ್ತಾಯವಾಯಿತು. ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಸ್ಥಳೀಯ ಉತ್ಪಾದಕರು ಸೇರಿ 100ಕ್ಕೂ ಹೆಚ್ಚು ಕಂಪನಿಗಳ ನೂರಾರು ಇವಿ ವಾಹನಗಳ ಪ್ರದರ್ಶನ ನಡೆಯಿತು.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಆಯೋಜಿಸಿದ್ದ ಇವಿ ಮೇಳದಲ್ಲಿ ದೇಶದ ಪ್ರಮುಖ ಇವಿ ಉತ್ಪಾದಕ ಕಂಪನಿಯಾಗಿರುವ ಟಾಟಾ ಮೋಟಾರ್ಸ್, ಎಂ.ಜಿ, ಬೋಲ್ಟ್, ಮೈ ಇವಿ ಸ್ಟೋರ್, ಎಂಪೇರ್ ಮತ್ತು ಏಥರ್ ಸೇರಿದಂತೆ ದೇಶದ ಪ್ರತಿಷ್ಠಿತ 100ಕ್ಕೂ ಹೆಚ್ಚು ವಿದ್ಯುತ್ ವಾಹನ ತಯಾರಕ ಮತ್ತು ಮಾರಾಟ ಮಳಿಗೆಗಳು ಭಾಗವಹಿಸಿದ್ದವು.
ಇ ವಾಹನಗಳ ಖರೀದಿಗೆ ಪ್ರೇರಣೆ: ಬೈಸಿಕಲ್ನಿಂದ ಹಿಡಿದು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳ ಜೊತೆಗೆ ದೇಶದ ಮೊದಲ ಇ ಟ್ರ್ಯಾಕ್ಟರ್ ಅನ್ನು ಸಹ ಪ್ರದರ್ಶನ ಮಾಡಲಾಯಿತು. ವೈಯಕ್ತಿಕ ಬಳಕೆ, ವಾಣಿಜ್ಯ ಬಳಕೆ ಮತ್ತು ಕೃಷಿ ಬಳಕೆ ಇವಿ ವಾಹನಗಳ ಪ್ರದರ್ಶನದ ಜೊತೆಗೆ ಚಾರ್ಜಿಂಗ್ ಸ್ಟೇಷನ್ಗಳು, ಚಾರ್ಜಿಂಗ್ ಪಾಯಿಂಟ್ಗಳು ಮತ್ತು ಬ್ಯಾಟರಿಗಳ ಪ್ರದರ್ಶನದ ಮೂಲಕ ಉದ್ಯಾನನಗರಿ ಜನರಿಗೆ ಇವಿ ಬಗ್ಗೆ ಸಮಗ್ರ ಮಾಹಿತಿ ನೀಡಿ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಪ್ರೇರೇಪಣೆ ನೀಡಿತು.
ಇ ಟ್ರ್ಯಾಕ್ಟರ್: ಕೃಷಿ ಪ್ರಧಾನವಾಗಿರುವ ದೇಶದಲ್ಲಿ ಕರ್ನಾಟಕವೂ ಕೃಷಿಯಲ್ಲಿ ದೊಡ್ಡ ಪಾಲು ಹೊಂದಿದ್ದು, ಕೃಷಿ ಭೂಮಿ ಉಳುಮೆ ಸೇರಿ ಕೃಷಿ ಚಟುವಟಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಟ್ರ್ಯಾಕ್ಟರ್ ಅನ್ನು ವಿದ್ಯುತ್ ಚಾಲಿತ ವಾಹನವಾಗಿ ಅಭಿವೃದ್ಧಿ ಪಡಿಸಿದ್ದು, ಕೃಷಿಕರ ಗಮನ ಸೆಳೆಯಿತು. ಸೆಲ್ವಿಸ್ಟಿಯಲ್ ಮೊಬಿಲಿಟಿ ಕಂಪನಿ ಅಭಿವೃದ್ಧಿ ಪಡಿಸಿರುವ ದೇಶದ ಮೊದಲ ಇ ಟ್ರ್ಯಾಕ್ಟರ್ ಆರು ಗಂಟೆಗಳಲ್ಲಿ ಪೂರ್ಣ ಚಾರ್ಜ್ ಮಾಡಬಹುದಾಗಿದ್ದು, ಅಷ್ಟೇ ಸಮಯ ಕೃಷಿ ಭೂಮಿ ಉಳುಮೆ ಮಾಡಬಹುದು ಹಾಗು ಕೃಷಿ ಉತ್ಪನ್ನ ಸಾಗಾಣಿಕೆ ಮಾಡುವುದಾದಲ್ಲಿ ಒಮ್ಮೆ ಚಾರ್ಜ್ ಮಾಡಿದರೆ 75 ಕಿಲೋ ಮೀಟರ್ ಸಂಚರಿಸಲಿದೆ. 6-8 ಟನ್‌ನಷ್ಟು ಭಾರ ಹೊತ್ತೊಯ್ಯುವ ಸಾಮರ್ಥ್ಯವಿರುವ ಇ ಟ್ರ್ಯಾಕ್ಟರ್, ಡೀಸೆಲ್ ಚಾಲಿತ ಟ್ರ್ಯಾಕ್ಟರ್ ಮೂಲಕ ಮಾಡಬಹುದಾದ ಬಿತ್ತನೆಯಿಂದ ಹಿಡಿದು ರಾಶಿಯನ್ನು ಮನೆಗೆ ತಂದು ಹಾಕುವವರೆಗಿನ ಎಲ್ಲ ಕೆಲಸವನ್ನೂ ಇ ಟ್ರ್ಯಾಕ್ಟರ್ ಮಾಡಲಿದೆ. ವಿವಿಧ ಮಾದರಿಯಲ್ಲಿ ಲಭ್ಯವಿರುವ ಇ ಟ್ರ್ಯಾಕ್ಟರ್ಗಳ ಬೆಲೆ 6-8 ಲಕ್ಷ ರೂ.ಗಳಾಗಿದೆ.
ಟೆಸ್ಟ್ ರೈಡ್: ಪ್ರದರ್ಶನ ಸ್ಥಳದಲ್ಲೇ ಟೆಸ್ಟ್ ರೈಡ್ಗೂ ಅವಕಾಶ ಕಲ್ಪಿಸಿದ್ದರಿಂದ ಇವಿ ಆಸಕ್ತ ಜನರು ಸ್ಕೂಟರ್, ಬೈಕ್ಗಳ ಟೆಸ್ಟ್ ರೈಡ್ ಮಾಡಿ ನೋಡಿದರು. ಇವಿ ಸ್ಕೂಟರ್, ಬೈಕ್ಗಳ ಫೀಚರ್ಸ್ ವಿಚಾರಿಸಿ ಕೆಲವರು ಸ್ಥಳದಲ್ಲೇ ಇವಿ ವಾಹನಗಳ ಬುಕಿಂಗ್ ಮಾಡಿದರು.
ಇವಿ ಖರೀದಿಗೆ ಉತ್ಸಾಹ: ಮೇಳದ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿದ ಸುಭಾಷ್ ಆಟೋಮೋಟಿವ್ ಕಂಪನಿ ಅಧಿಕಾರಿ ನಾಗೇಶ್, ನಮ್ಮ ಕಂಪನಿಯ 14 ಮಾದರಿ ಇ ವಾಹನಗಳನ್ನು ಪ್ರದರ್ಶನ ಮಾಡಿದ್ದೇವೆ. ಸೈಕಲ್ನಿಂದ ಹಿಡಿದು, ಸ್ಪೋರ್ಟ್ಸ್ ಬೈಕ್, ಸೂಪರ್ ಬೈಕ್ ವರೆಗೂ ನಮ್ಮ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಿದ್ದೇವೆ. 60 ರಿಂದ 150 ಕಿಲೋ ಮೀಟರ್ ಮೈಲೇಜ್ ನೀಡುವ ವಾಹನ ಪ್ರದರ್ಶಿಸಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ಹಲವು ಮೇಳಗಳಲ್ಲಿ ನಾವು ಭಾಗಿಯಾಗಿದ್ದೇವೆ. ಆದರೆ ಅವುಗಳಲ್ಲೆಲ್ಲಾ ಇದೇ ಅತ್ಯುತ್ತಮ ಮೇಳವಾಗಿದೆ. ಇಲ್ಲಿನ ಜನ ಇವಿಗಳಿಗೆ ಅತ್ಯಂತ ಉತ್ಸಾಹ ತೋರುತ್ತಿದ್ದಾರೆ. ಕೆಲವರು ವಾಹನಗಳ ಬುಕಿಂಗ್ ಕೂಡ ಮಾಡುತ್ತಿದ್ದಾರೆ ಎಂದರು.
ಚಾರ್ಜಿಂಗ್ ಸ್ಟೇಷನ್ಗಳ ಸಮಸ್ಯೆಗೆ ಪರಿಹಾರ: ಕರ್ನಾಟಕ ವಿದ್ಯುತ್ ಚಾಲಿತ ವಾಹನಗಳ ಸಂಘದ ಸಂಸ್ಥಾಪಕ ಕಾರ್ಯದರ್ಶಿ ವೆಂಕಟೇಶ್ ಗೌಡ ಮಾತನಾಡಿ, ದ್ವಿಚಕ್ರ ವಾಹನಗಳಿಗೆ ಚಾರ್ಜಿಂಗ್ ಸಮಸ್ಯೆ ಇಲ್ಲ. ಚಾರ್ಜ್ಗೆ ಸ್ಟೇಷನ್ಗಳ ಅಗತ್ಯವಿಲ್ಲ. ಕೇವಲ ಕೇಬಲ್ ಸಾಕು. ಅದನ್ನು ಎಲ್ಲಾ ವಾಹನಕ್ಕೂ ಕೊಡಲಾಗಿರುತ್ತದೆ. ಆದರೆ ಬಸ್ಸು ಲಾರಿ ಈ ರೀತಿ ವಾಹನಗಳಿಗೆ ಮಾತ್ರ ಚಾರ್ಜಿಂಗ್ ಸ್ಟೇಷನ್ ಬೇಕಾಗಿದೆ. ಈಗಾಗಲೇ ಇವಿ ಉತ್ಪಾದಿಸುವ ಎಲ್ಲಾ ಸಂಸ್ಥೆಗಳ ಜೊತೆ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳುತ್ತಿದೆ. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ನಮ್ಮ ಜೊತೆ ಕೂಡ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಪವರ್ ಸ್ಟೇಷನ್ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳ ಸಮಸ್ಯೆಯೂ ಕೂಡ ಪರಿಹಾರವಾಗಲಿದೆ ಎಂದರು.
ಐಹೆಚ್ಎಫ್ಎಲ್ ಸಂಸ್ಥೆಯ ಅಜಯ್ ಶರ್ಮಾ ಮಾತನಾಡಿ, ನಮ್ಮ ವಿದ್ಯುತ್ ಸ್ಟೇಷನ್ ವಿದ್ಯುತ್ ಮತ್ತು ಸೋಲಾರ್ನಿಂದ ಕೆಲಸ ಮಾಡಲಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಕನಸಿನ ಯೋಜನೆ ಇದಾಗಿದೆ. ನಿರುದ್ಯೋಗ ಸಮಸ್ಯೆಗೂ ಈ ಯೋಜನೆ ಪರಿಹಾರವಾಗಲಿದೆ. ತೈಲ ದರ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಇವಿ ಭವಿಷ್ಯದ ವಾಹನವಾಗಲಿದ್ದು, ನಾವು ಚಾರ್ಜಿಂಗ್ ಘಟಕ ಪೂರೈಕೆ ಮಾಡುತ್ತೇವೆ. ಬ್ಯಾಂಕ್ನ ಹಣಕಾಸು ಸಾಲಸೌಲಭ್ಯ ಕೂಡ ಇದೆ. ನಮ್ಮ ಚಾರ್ಜಿಂಗ್ ಸ್ಟೇಷನ್ನಲ್ಲಿ ಪ್ರತಿ ಯೂನಿಟ್ಗೆ ಎರಡು ರೂ. ಶುಲ್ಕವಾಗಲಿದೆ ಎಂದರು.
ಜನರಿಂದ ಉತ್ತಮ ಸ್ಪಂದನೆ: ಮಾಜಿ ಉಪ ಮೇಯರ್ ಹರೀಶ್ ಮಾತನಾಡಿ, ನಮ್ಮ ಸರ್ಕಾರ ಇವಿ ಚಾರ್ಜಿಂಗ್ ಸ್ಟೇಷನ್ಗಳು ಟೈಪ್ ಟು, ಟೈಪ್ ತ್ರಿ ಸಿಟಿಗಳಲ್ಲಿ ಇರಬೇಕು ಎನ್ನುವ ಚಿಂತನೆಯೊಂದಿಗೆ ಸ್ಟೇಷನ್ಗಳನ್ನು ಆರಂಭಿಸಲಾಗಿದೆ. ಈಗ ಟ್ರಕ್ಗಳೇ ಇವಿಯಾಗಿ ಬಂದಿವೆ. ಭವಿಷ್ಯದ ಪೀಳಿಗೆಗೆ ಇವಿ ಕೊಡುಗೆಯಾಗಲಿದೆ. ಹಾಗಾಗಿ ನಮ್ಮ ಸರ್ಕಾರ ಇವಿ ಉತ್ತೇಜನಕ್ಕಾಗಿ ಇವಿ ಮೇಳ ಆಯೋಜನೆ ಮಾಡಿದೆ. ಇಲ್ಲಿ ಎಲ್ಲ ರೀತಿಯ ವಾಹನಗಳ ಪ್ರದರ್ಶನ ಮಾಡಲಾಗಿದೆ. ಸೈಕಲ್ ನಿಂದ ಹಿಡಿದು ದ್ವಿಚಕ್ರ ವಾಹನ, ಆಟೋ, ಟ್ರ್ಯಾಕ್ಟರ್, ಕಾರುಗಳು ಪ್ರದರ್ಶನದಲ್ಲಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡುತ್ತೇನೆ: ಸಿನ್ಹಾ
ಒಟ್ಟಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಆಯೋಜಿಸಿದ್ದ ಮೂರು ದಿನಗಳ ಇವಿ ಮೇಳ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಆರು ಸಾವಿರಕ್ಕೂ ಹೆಚ್ಚಿನ ದ್ವಿಚಕ್ರ ವಾಹನ, ಸಾವಿರಕ್ಕೂ ಹೆಚ್ಚಿನ ಟ್ರ್ಯಾಕ್ಟರ್ ಗಳ ಬುಕಿಂಗ್ ಮಾಡಿಕೊಳ್ಳಲಾಗಿದೆ. ಭವಿಷ್ಯದ ಇವಿ ವಾಹನ ಬಳಕೆಗೆ ಇಂದಿನ ಮೇಳ ಒಂದು ರೀತಿಯ ಮುನ್ನುಡಿ ಬರೆದಿದೆ ಎನ್ನಬಹುದಾಗಿದೆ.