ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪೂರ್ವ ವಲಯದ ಕೋವಿಡ್ ಕಮಾಂಡ್ ಸೆಂಟರ್ಗೆ, ಆಯುಕ್ತರಾದ ಮಂಜುನಾಥ್ ಪ್ರಸಾದ್, ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ, ಆರೋಗ್ಯಾಧಿಕಾರಿ ಸಿದ್ದಪ್ಪಾಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಂಟ್ಯಾಕ್ಟ್ ಟ್ರೇಸಿಂಗ್, ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ, ಸ್ವ್ಯಾಬ್ ಟೆಸ್ಟ್ ಮಾಡುವ ಬಗ್ಗೆ ಅಧಿಕಾರಿಗಳಿಂದ ಆಯುಕ್ತರು ಮಾಹಿತಿ ಪಡೆದರು.
ಹೋಮ್ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುವವರರ ಬಗ್ಗೆ ಇಂಡೆಕ್ಸ್ ತಂತ್ರಾಂಶದಲ್ಲಿ ಮಾಹಿತಿ ಬರಲಿದೆ. ಅದಕ್ಕಾಗಿ ಪೂರ್ವ ವಲಯ ವ್ಯಾಪ್ತಿಗೊಳಪಡುವ ವಿಧಾನಸಭಾ ಕ್ಷೇತ್ರಗಳಿಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅವರು, ಹೋಮ್ ಐಸೋಲೇಶನ್‌ನಲ್ಲಿ ಇರುವವರ ಜೊತೆ ದೂರವಾಣಿ ಮೂಲಕ ಕರೆ ಮಾಡಿ, ಮನೆಯ ವಾತಾವರಣ, ಪ್ರತ್ಯೇಕ ಕೋಣೆ ಹಾಗೂ ಶೌಚಾಲಯ, ರೋಗ ಲಕ್ಷಣಗಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಜೊತೆಗೆ ಪಾಲಿಕೆ ವೈದ್ಯರು ಮನೆಗೆ ಭೇಟಿ, ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ಹೋಮ್‌ಐಸೋಲೇಶನ್ ನಲ್ಲಿರಲು ಅನುಮತಿ ನೀಡಲಾಗುತ್ತದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.
ಪೂರ್ವ ವಲಯದ ಕಳೆದ 10 ದಿನದ ಕೋವಿಡ್ ವರದಿ:
ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ: 5,866
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ:1,771
ಹೋಮ್ ಐಸೋಲೇಶನ್‌ನಲ್ಲಿರುವವರ ಸಂಖ್ಯೆ: 2,968
ಕೋವಿಡ್ ಆರೈಕೆ ಕೇಂದ್ರದಲ್ಲಿರುವವರ ಸಂಖ್ಯೆ: 135
ಮಿಸ್ಸಿಂಗ್ ಆಗಿರುವವ ಸಂಖ್ಯೆ: 873
ಕ್ವಾರಂಟೈನ್‌ನಲ್ಲಿರುವವರ ಸಂಖ್ಯೆ: 29,772
ಸಾವಿನ ಸಂಖ್ಯೆ : 12
ಹೋಮ್ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಕಾಲ - ಕಾಲಕ್ಕೆ ಕರೆ ಮಾಡಿ ವಿಚಾರಿಸುವ ಸ್ವಯಂ ಸೇವಕರ ತಂಡ, ಆರೋಗ್ಯ ವಿಚಾರಣೆ, ಮಾತ್ರೆಗಳ ವಿತರಣೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಸರಿಯಾಗಿ ನಿಭಾಯಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಹೇಗಿದೆ? ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಹಾಗೂ ಐಸಿಯು ಇರುವ ಬಗ್ಗೆ ಮಾಹಿತಿ ಪಡೆದು ಸೋಂಕಿತರನ್ನು ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ನೋಡಲ್ ಅಧಿಕಾರಿಗಳ ಜೊತೆ ಮಾತನಾಡಿ, ಹಾಸಿಗೆಯನ್ನು ಕಾಯ್ದಿರಿಸಿ ಸೋಂಕು ಧೃಡಪಟ್ಟವರನ್ನು ಆಸ್ಪತ್ರೆಗೆ ಕಳುಹಿಸಬೇಕು. ಪಾಲಿಕೆಯ ಪೋರ್ಟಲ್ನಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಇದೆ ಎಂಬ ಮಾಹಿತಿ ಲಭ್ಯವಾಗಲಿದ್ದು, ಆ ಮೂಲಕ ಯಾರಿಗೂ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೊಬೈಲ್ ಯುನಿಟ್ ಗಳಲ್ಲಿ ನಿತ್ಯ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಹೋಮ್ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಂದ ಫೀಡ್‌ಬ್ಯಾಕ್ ಪಡೆಯಲು ಫೀಡ್‌ಬ್ಯಾಕ್ ಫಾರಂ ಸಿದ್ದಪಡಿಸಿ ಅಭಿಪ್ರಾಯ ಸಂಗ್ರಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ಮಾರ್ಷಲ್ಗಳೊಂದಿಗೆ ಮಾತನಾಡಿದ ಬಿಬಿಎಂಪಿ ಕಮಿಷನರ್, ಸಾರ್ವಜನಿಕರ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಇದ್ದರೆ ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಒಂದು ಸಾವಿರದ ದಂಡ ವಿಧಿಸಿ ಎಂದು ಸೂಚಿಸಿದರು.