ಬೆಂಗಳೂರು: ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಬಂಧನವಾಗಿರುವ ಪಿಎಫ್ಐ ಸಂಘಟನೆಯ ಪ್ರಮುಖರ ಮನೆಯಲ್ಲಿ ಸಾವರ್ಕರ್ ಪುಸ್ತಕ ಸಿಕ್ಕಿದೆ. ಸಾವರ್ಕರ್ ಸತ್ಯ ಎಷ್ಟು ಮಿಥ್ಯ ಪುಸ್ತಕಗಳು ಸೇರಿದಂತೆ ಹಿಂದೂ ಸಂಘಟನೆಗಳ ಹಲವು ಪ್ರಮುಖರ ಪುಸ್ತಕ ದೊರೆತಿದ್ದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಾವರ್ಕರ್ ಪುಸ್ತಕದ ಜೊತೆಗೆ ಹಿಂದೂ ಟೆರರಿಸಂ ಆನ್ ಮೈನಾರಿಟಿ, ಕೋಮುವಾದ ಮತ್ತು ಭಯೋತ್ಫಾದನೆ, ಹೌ ಅಮೆರಿಕ ಗಾಟ್ ಡಿಫಿಟೆಡ್ ಇನ್ ವಾರ್ ಆನ್ ಟೆರರ್ ಪುಸ್ತಕಗಳು ಸಹ ದೊರೆತಿವೆ. ಈ ಪುಸ್ತಕಗಳ ಮೂಲಕ ಅನೇಕರಿಗೆ ಒಂದು ಕೋಮಿನ ಬಗ್ಗೆ ದ್ವೇಷ ಹುಟ್ಟಿಸಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದರು ಎಂಬ ಅನುಮಾನ ಎನ್ಐಎ ತಂಡ ಹಾಗೂ ಪೊಲೀಸರಿಗೆ ಶುರುವಾಗಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಎನ್ಐಎ ದಾಳಿ: ಪಿಎಫ್ಐ ಜಿಲ್ಲಾಧ್ಯಕ್ಷನ ಮನೆಯಲ್ಲಿ 14 ಲಕ್ಷ ನಗದು, 17 ಹೊಸ ಮೊಬೈಲ್ ಪತ್ತೆ
ಹಲವಾರು ಪೇಪರ್ಗಳ ಕಾಲಂ ರೈಟಿಂಗ್ ಹಾಗೂ ಟಾಬ್ಲಾಯ್ಡ್ ಪತ್ರಿಕೆಗಳು ಸಹ ಲಭ್ಯವಾಗಿವೆ. ಪ್ರಮುಖವಾಗಿ ಹಿಂದೂ ಸಂಘಟನೆಗೆ ವಿರೋಧವಾಗಿ ಬರೆದಿರುವ ಅನೇಕ ಬರವಣಿಗೆಗಳು ಪೊಲೀಸರ ಕೈ ಸೇರಿವೆ. ಬಂಧನಕ್ಕೊಳಗಾಗಿರುವ ವ್ಯಕ್ತಿಗಳ ಮನೆಯಲ್ಲಿ ಸುಮಾರು 40 ಲಕ್ಷ ರೂಪಾಯಿಗಳು ಲಭಿಸಿದ್ದು, ಈ ಹಣ ಎಲ್ಲಿಂದ ಬಂತು?. ಹೇಗೆ ಬಂತು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಆರೋಪಿತರ ಬ್ಯಾಂಕ್ ಖಾತೆಯ ವಿವರಗಳನ್ನ ಕೂಡ ಕಲೆ ಹಾಕುತ್ತಿದ್ದಾರೆ.
ಇಸ್ಲಾಂ ದೇಶದ ವ್ಯಕ್ತಿಗಳ ಜೊತೆಗೆ ಸಂಪರ್ಕ: ಆರೋಪಿಗಳು ದುಬೈ, ಪಾಕಿಸ್ತಾನ, ಇರಾನ್ನ ಕೆಲ ವ್ಯಕ್ತಿಗಳ ಜೊತೆಗೂ ಕೂಡ ಸಂಪರ್ಕದಲ್ಲಿದ್ದರು ಎಂಬ ಸ್ಪೋಟಕ ಮಾಹಿತಿ ಸಹ ಲಭಿಸಿದೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ನಂತರ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಸಮಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಬಂಧಿತರು ಯೋಜನೆ ರೂಪಿಸಿದ್ದರು ಎನ್ನಲಾಗುತ್ತಿದೆ.
ಹುಡುಗರಿಗೆ ವಿಧ್ವಂಸಕ ಕೃತ್ಯಗಳ ತರಬೇತಿ: ಪ್ರಮುಖವಾಗಿ ಎಸ್ಎಸ್ಎಲ್ಸಿ, ಪಿಯುಸಿ ಮುಗಿಸದ ಹುಡುಗರಿಗೆ ವಿಧ್ವಂಸಕ ಕೃತ್ಯಗಳನ್ನು ಹೇಗೆ ಮಾಡಬೇಕು ಎಂಬುದರ ಕುರಿತು ತರಬೇತಿ ನೀಡಲು ಮುಂದಾಗಿದ್ದರು. ಕೆಲ ರಾಜಕಾರಣಿಗಳ ಜೊತೆಯೂ ಆರೋಪಿಗಳು ನಿಕಟ ಸಂಪರ್ಕದಲ್ಲಿದ್ದರು ಎನ್ನುವುದು ಅತ್ಯಂತ ಪ್ರಮುಖ ಅಂಶವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪಿಎಫ್ಐ ಪ್ರತಿಭಟನೆಯಲ್ಲಿ ಕೇಳಿ ಬಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ