ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವವರ ಬಾಯಿಗೆ ಬೀಗ ಹಾಕಬೇಕಾದ ಅವಶ್ಯಕತೆ ಇದೆ. ಡಜನ್‌ಗಟ್ಟಲೆ ವ್ಯಕ್ತಿಗಳು ಪಕ್ಷದ ಮೇಲೆ ನಿರಂತರವಾಗಿ ಮಾತಾಡುತ್ತಿದ್ದರೂ ಯಾಕೆ ಯಾವುದೇ ನಾಯಕರು ಮಾತಾಡುತ್ತಿಲ್ಲ ಎಂದು ಡಿ.ವಿ.ಸದಾನಂದ ಗೌಡ ಪ್ರಶ್ನೆ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷವನ್ನು ಯಾರಾದರೂ ಕುಲಗೆಡಿಸುವುದಿದ್ದರೆ ಬಿಜೆಪಿಯ ಒಳಗೇ ಇರುವ ವಿರೋಧಿಗಳು. ಹಾಗಾಗಿ ಕೇಂದ್ರದ ವರಿಷ್ಠರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ರಾಜ್ಯ ಬಿಜೆಪಿ ಪಕ್ಷದ ಮುಖಂಡರು ಮಾತನಾಡದೇ ಇರುವುದು ಕರ್ನಾಟಕದಲ್ಲಿ ಪಕ್ಷಕ್ಕೆ ಯಾರೂ ಹೇಳುವವರು ಕೇಳುವವರು ಇಲ್ಲ, ನಾವು ನಡೆದದ್ದೇ ದಾರಿ ಎಂದು ತಿಳಿದುಕೊಂಡಿರುವುದನ್ನು ನೋಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದ ವಿರುದ್ಧ ಬಿಜೆಪಿ ಒಟ್ಟಾಗಿ ಹೋರಾಟ ಮಾಡಿದರೆ ಯಾವ ಮಂತ್ರಿ, ಸಿಎಂ ಮನೆಯಿಂದ ಹೊರಬರಲು ಸಾಧ್ಯವಾಗದ ರೀತಿಯಲ್ಲಿ ಜನಾಂದೋಲನ ರೂಪಿಸಬಹುದು. ವಿಕಸಿತ ಬಿಜೆಪಿ ಮಾಡಲು ಯಾಕೆ ಮುಂದಾಗುತ್ತಿಲ್ಲ ಎಂದು ನಿನ್ನೆ ನನ್ನನ್ನು ಕೇಳಿದರು. ಪಕ್ಷದ ಚಟುವಟಿಕೆಗಳನ್ನು ಹೇಗೆ ಮುಂದುವರಿಸುವುದು ಎಂದು ನನಗೆ ಅನ್ನಿಸುತ್ತಿದೆ. ಆಶಿಸ್ತು ಅಂತಾ ಗೊತ್ತಿದ್ದೂ ಮಾತಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ರಾಜ್ಯ ನಾಯಕರಿಗೆ ತಾಕತ್ ಇಲ್ಲ ಅಂತಾ ಅನ್ನಿಸುವ ರೀತಿ ಇದೆ ಎಂದು ಸದಾನಂದಗೌಡ ಹೇಳಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಡಜನ್‌ಗಟ್ಟಲೆ ನಾಯಕರು ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ ಅವರು ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದಾಗ ನಾನು ಒಂದೇ ಗಂಟೆಯಲ್ಲಿ ನೋಟಿಸ್ ಕೊಟ್ಟು ಸಸ್ಪೆಂಡ್ ಮಾಡಿದ್ದೆ.
ಬಿ.ಎಸ್.ಯಡಿಯೂರಪ್ಪ ಅವರ ಒತ್ತಾಯದಿಂದ ಮತ್ತೆ ಸೇರಿಸಿಕೊಂಡಿದ್ದೆ. ನನ್ನ ಕಾಲದಲ್ಲಿ ಇದನ್ನು ನಾನು ಮಾಡಿದ್ದೆ, ಆದ್ದರಿಂದ ನಾನು ಹೇಳುತ್ತಿದ್ದೇನೆ. ಈಗ ಯಾಕೆ ಅದನ್ನು ಮಾಡುತ್ತಿಲ್ಲ? ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್‌ನಿಂದ ಇಂದು ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ನಿನ್ನೆ ಸುಬ್ರಹ್ಮಣ್ಯ ಸಮೀಪ ಕಾರ್ಯಕ್ರಮಕ್ಕೆ ಹೋಗಿದ್ದಾಗ ಸುಳ್ಯದ ಬಿಜೆಪಿ ಮುಖಂಡರು ನನ್ನನ್ನು ಬೇಸರದಿಂದ ಪ್ರಶ್ನೆ ಮಾಡಿದರು ಎಂದು ತಿಳಿಸಿದರು.
ಇದನ್ನೂ ಓದಿ: ಒಕ್ಕಲಿಗ ಕಾರ್ಯಕ್ರಮದಲ್ಲಿ ಆಡಿದ ಒಂದು ಮಾತಿನಿಂದ ಸಿಎಂ ಸ್ಥಾನವನ್ನೇ ಕಳೆದುಕೊಂಡೆ: ಸದಾನಂದಗೌಡ