ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಹೆಸರು ಮಾಡಿರುವ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿಯಾಗಿರುವ ಅವರು ಡಿಜಿಪಿ ಮೂಲಕ ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಗೃಹ ಕಾರ್ಯದರ್ಶಿಗಳು ಅಲ್ಲಿಂದ ಕೇಂದ್ರ ಯುಪಿಎಸ್ಗೆ ರಾಜೀನಾಮೆ ಪತ್ರ ರವಾನೆ ಮಾಡಲಿದ್ದಾರೆ.
ಖಡಕ್ ಅಧಿಕಾರಿ ರಾಜೀನಾಮೆ ಹಿಂದಿದೆ ರೋಚಕ ಕಥೆ :
ಅಣ್ಣಾಮಲೈ ಅವರು ಕೆಲಸಕ್ಕೆ ಸೇರಿ ಸುಮಾರು 9 ವರ್ಷಕ್ಕೂ ಹೆಚ್ಚು ದಿನಗಳು ಕಳೆದಿವೆ. ರಾಜೀನಾಮೆಗೆ ಫ್ಯಾಮಿಲಿ, ತಂದೆ ತಾಯಿ, ವೈಯಕ್ತಿಕ ಜೀವನದ ಕಾರಣ ಕೊಟ್ಟಿದ್ದಾರೆ. ವೃತ್ತಿಗೆ ಸೇರಿದ ನಂತರ ಒಂದೇ ಒಂದು ಮದುವೆ ಅಟೆಂಡ್ ಮಾಡಿದ್ದೀನಿ. ನಾನು ಇಲ್ಲಿ ಇರೋದಕ್ಕೆ ಕೆಲವು ಪ್ರಮುಖರು ಕಾರಣರಾಗಿದ್ರು. ಆದರೆ, ಕೊನೆಯ ಪಕ್ಷ ಅವರ ಅಂತ್ಯಕ್ರಿಯೆಗೂ ನಾನು ಹೋಗೋದಕ್ಕೆ ಆಗ್ಲಿಲ್ಲ. ತಂದೆ ತಾಯಿ, ಬಂಧು ಬಳಗ ಎಲ್ಲಾ ಊರಲ್ಲಿದ್ದಾರೆ. ನಾನು ಇಲ್ಲಿದ್ದು ಏನ್ ಮಾಡ್ಲಿ? ಹೀಗಾಗಿ ನಾನು ರಾಜೀನಾಮೆ ನೀಡಿದ್ದೇನೆ.

ಕಳೆದ ಆರು ತಿಂಗಳ ಹಿಂದೆ ರಾಜೀನಾಮೆ ನೀಡಲು ಪ್ಲಾನ್ ಮಾಡಿದ್ದೆ. ಎಲೆಕ್ಷನ್ ಮುಗಿಸದೇ ಹೋದ್ರೆ ಸರಿ ಹೋಗಲ್ಲ ಅಂತಾ ಎಲೆಕ್ಷನ್ ಬಂದೋಬಸ್ತ್ ಮುಗಿಸಿದ್ದೇನೆ ಎಂದು ತಮ್ಮ ಮನದಾಳದ ಮಾತು ಆಡಿದ್ದಾರೆ.
ಮಲೇಷ್ಯಾದಿಂದ ರಾತ್ರೋರಾತ್ರಿ ವಿಮಾನ ಹತ್ತಿ ಬಂದು ಯುಪಿಎಸ್ಸಿ ಪರೀಕ್ಷೆ ಬರೆದಿದ್ದೆ. ಇದೇ ಜೀವನ ಅಲ್ಲ, ಇನ್ನೂ ಬೇರೆ ಜೀವನ ಇದೆ. ಎಷ್ಟು ದಿನ ಕೊಲೆ, ಸುಲಿಗೆ, ದರೋಡೆ ಬಗ್ಗೆ ಕೆಲಸ ಮಾಡಲಿ. ಸದ್ಯ ಯಾವ ರಾಜಕೀಯಕ್ಕೂ ಸೇರೋದಿಲ್ಲ. ಮುಂದಿನ ಆರು ತಿಂಗಳು ಏನೂ ಮಾಡೋದಿಲ್ಲ. ರೆಸ್ಟ್ ಮಾಡ್ತೀನಿ, ಹಿಮಾಲಯ ಟ್ರೆಕ್ಕಿಂಗ್ ಹೋಗ್ತೀನಿ, ಫ್ಯಾಮಿಲಿಗೆ ಟೈಮ್ ಕೊಡ್ತೀನಿ. ಮಗ ಓದ್ತಿದ್ದಾನೆ ಅವನ ಜೊತೆ ಇರ್ತೀನಿ ಎಂದು ಹೇಳಿದ್ದಾರೆ ಖಡಕ್ ಸಿಂಗಂ.
33-34ನೇ ವಯಸ್ಸಿಗೆ ಯಾರು ಈ ನಿರ್ಧಾರ ತೆಗೆದುಕೊಳ್ಳಲ್ಲ. ನಾನು ತೆಗೆದುಕೊಂಡಿದ್ದೇನೆ. ನನಗೆ ನನ್ನದೇ ಆದ ಬೇರೆ ಜೀವನ ಇದೆ ಎಂದು ತಮ್ಮ ನಿರ್ಧಾರದ ಬಗ್ಗೆ ತಿಳಿಸಿದರು. ಖಾಕಿ ಹಾಕಿ ಕೊಂಡು ಕರ್ತವ್ಯ ಮಾಡ್ತಿದ್ದಾಗ, ನಾನು ದೇವರ ಕೆಲಸ ಮಾಡ್ತಿದ್ದೇನೆ ಎಂಬ ಭಾವನೆ, ಹೆಮ್ಮೆ ಇತ್ತು. ಖಾಕಿ ಬಟ್ಟೆ ಹಾಕಿ ನನ್ನ ಕೆಲಸವನ್ನ ನಿಷ್ಠೆಯಿಂದಲೇ ಮಾಡಿರುವೆ. ನಾನು ಕೈಲಾಸ ಮಾನಸ ಸರೋವರಕ್ಕೆ ಪ್ರವಾಸಕ್ಕೆ ತೆರಳಿದ್ದೆ. ಆ ಯಾತ್ರೆ ನನ್ನ ಕಣ್ಣು ತೆರೆಸಿತು. ಆಗಲೇ ನನಗೆ ಜೀವನ ಸುಂದರವಾಗಿರಲು ಏನು ಮುಖ್ಯ ಅನ್ನೋದು ಅರಿವಿಗೆ ಬಂದಿತು. ಐಪಿಎಸ್ ಡಾ. ಮಧುಕರ್ ಶೆಟ್ಟಿ ಸರ್ ಸಾವು ನನ್ನನ್ನು ಸಾಕಷ್ಟು ವಿಚಲಿತಗೊಳ್ಳುವಂತೆ ಮಾಡಿತು. ಅಷ್ಟೇ ಅಲ್ಲ, ನಾನು ನನ್ನ ಜೀವನವನ್ನ ಮರಳಿ ಅವಲೋಕನ ಮಾಡಿಕೊಳ್ಳುವಂತೆ ಮಾಡಿದೆ.
ನಾನು ಸ್ನೇಹಿತರನ್ನ ಮತ್ತು ಇಲಾಖೆಯಲ್ಲಿ ನನ್ನ ಜತೆಗೆ ಕೆಲಸ ಮಾಡಿರುವವರನ್ನ ಬಿಟ್ಟು ಹೋಗ್ತಿರುವ ನೋವು ನನ್ನ ಕಾಡುತ್ತಿದೆ. ಯಾರಿಗೆ ನನ್ನ ರಾಜೀನಾಮೆಯಿಂದ ಮನಸ್ಸಿಗೆ ನೋವಾಗಿದೆಯೋ ಅದಕ್ಕೆ ನಾನು ಕ್ಷಮೆ ಕೋರುತ್ತೇನೆ. ಜೀವನ ಇಷ್ಟಕ್ಕೆ ಮುಗಿಯೋದಿಲ್ಲ ಅಂತಾ ತುಂಬಾ ಭಾವನಾತ್ಮಕವಾಗಿ ಅಣ್ಣಾ ಮಲೈ ರಾಜೀನಾಮೆ ಪತ್ರದಲ್ಲಿ ಬರೆದುಕೊಂಡಿದ್ದಾರೆ.