ಬೆಂಗಳೂರು: ಡ್ರಗ್ಸ್ ದಂಧೆ ಮಟ್ಟಹಾಕುವ ವಿಚಾರದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ರಾಜಿಯಾಗಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.
ನಿಯಮ 72ರ ಅಡಿ ಡ್ರಗ್ ಮಾಫಿಯಾ ವಿರುದ್ಧ ಭಾರತಿ ಶೆಟ್ಟಿ ಹಾಗೂ ಲೆಹರ್ ಸಿಂಗ್ ಮಂಡಿಸಿದ ಪ್ರಸ್ತಾಪದ ಮೇಲೆ ಸುದೀರ್ಘ ಚರ್ಚೆ ನಡೆಯಿತು. ಈ ಬಳಿಕ ಮಾತನಾಡಿದ ಸಚಿವರು, ನೈಜೀರಿಯಾ ಮತ್ತು ಆಫ್ರಿಕಾದಿಂದ ಬಂದವರ ಮೇಲೆ ನಿಗಾವಹಿಸಲಾಗುತ್ತಿದೆ. ಅತಿ ಹೆಚ್ಚು ಡ್ರಗ್ಸ್ ನೈಜೀರಿಯಾದಿಂದ ಬರುತ್ತದೆ. ಈವರೆಗೂ ಅನೇಕರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆಯೂ ಆಗಿದೆ. ಈ ವರ್ಷ 2,589 ಪ್ರಕರಣಗಳು ದಾಖಲಾಗಿವೆ. ಸೆಲೆಬ್ರಿಟಿಸ್, ದೊಡ್ಡವರೂ ಇದರಲ್ಲಿ ಭಾಗಿ ಆಗಿದ್ದಾರೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಡ್ರಗ್ ನಿಯಂತ್ರಣಕ್ಕೆ ನೂತನ ಕಾನೂನು ತರಲಿದ್ದೇವೆ. ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಈ ಕುರಿತು ಕಾಯ್ದೆ ಸಿದ್ಧವಾಗುತ್ತಿದೆ. ಡ್ರಗ್ ಪರ ಮಾತನಾಡಿದವರನ್ನೂ ಒಳಗೆ ಹಾಕುತ್ತೇವೆ. ಡಾರ್ಕ್ ವೆಬ್ ಮೂಲಕ ಡ್ರಗ್ ಪೂರೈಕೆ ಆಗುತ್ತಿದೆ. ಈಗಾಗಲೇ 21 ಪೆಡ್ಲರ್‌ಗಳನ್ನು ಬಂಧಿಸಿದ್ದೇವೆ. 2,000 ಎಲ್‌ಎಸ್‌ಡಿ ಸ್ಟ್ರಿಪ್ಸ್ ಸೇರಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಪಂಚತಾರಾ ಹೋಟೆಲ್, ಪಬ್, ಕ್ಲಬ್ಗಳಲ್ಲಿ ಮಾದಕ ವಸ್ತುಗಳು ಬಳಕೆಯಾಗಿವೆ. ನಟ, ನಟಿ, ಶ್ರೀಮಂತ ಉದ್ಯಮಿಗಳು ಸೇರಿ ಅನೇಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಿಸಿಬಿ ಪೊಲೀಸರು 1 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಎನ್ಡಿಪಿಎಸ್ ಕಾಯ್ದೆ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲೆ, ಕಾಲೇಜುಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ವಿಧಾನಪರಿಷತ್ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಮಾತನಾಡಿ, ಕರ್ನಾಟಕ ಮತ್ತೊಂದು ಉಡ್ತಾ ಪಂಜಾಬ್ ಆಗುತ್ತಿದೆ. ಬಾಂಗ್ಲಾದಿಂದ ಬಂದಿರುವ ಜನ ಡ್ರಗ್ ದಂಧೆ ಮಾಡುತ್ತಿದ್ದಾರೆ. ಯಾವುದೋ ನೆಪದಿಂದ ಬಂದು ಇಲ್ಲಿ ಸೇರುತ್ತಾರೆ. ನಂತರ ಡ್ರಗ್ ಪೂರೈಕೆ ಮಾಡುತ್ತಾರೆ. ನಾನು ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡುವುದರಿಂದ ಸರ್ಕಾರದ ವಿರುದ್ಧ ಮಾತನಾಡಿದಂತಲ್ಲ. ಈ ಸರ್ಕಾರದಲ್ಲಿ ಕಾಂಗ್ರೆಸ್, ಜೆಡಿಎಸ್ನ ಶಾಸಕರೂ ಇದ್ದಾರೆ. ನಮ್ಮದು ಒಂದು ರೀತಿಯ ಸಮ್ಮಿಶ್ರ ಸರ್ಕಾರ. ಹೀಗಾಗಿ ನಮ್ಮ ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಆದರೆ ಸಾಕ್ಷಿ ಇಲ್ಲದೇ ಯಾವ ಕೇಸುಗಳು ನಿಲ್ಲುವುದಿಲ್ಲ ಎಂದರು.
ಬೆಂಗಳೂರು ಹೊರವಲಯದಲ್ಲಿ ನಡೆಯುವ ಪಾರ್ಟಿಗಳಿಗೆ ಪೊಲೀಸರು ಹಫ್ತಾ ಪಡೆದು ದಂಧೆಗೆ ಸಹಕಾರ ನೀಡುತ್ತಿದ್ದರು. ಪೊಲೀಸರು ತಮ್ಮ ವಿರುದ್ಧವೇ ತನಿಖೆ ಮಾಡುತ್ತಾರೆಯೇ? ಪೊಲೀಸರಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಬೇಕು. ಈ ವಿಷಯದಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು. ಈಗ ಪೊಲೀಸ್ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್ಆರ್ ಪಾಟೀಲ್, ಸದಸ್ಯರಾದ ಪಿ ಆರ್ ರಮೇಶ್, ರಮೇಶ್ ಗೌಡ, ರವಿಕುಮಾರ್, ಅಪ್ಪಾಜಿಗೌಡ, ಕೆಸಿ ಕೊಂಡಯ್ಯ ಮತ್ತಿತರ ಸದಸ್ಯರು ಈ ದಂಧೆಯನ್ನು ಮಟ್ಟ ಹಾಕಲೇಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.