ಬೆಂಗಳೂರು: ಜಿ20 ಡಿಜಿಟಲ್ ಇನೋವೇಶನ್ ಅಲೈಯನ್ಸ್ ಶೃಂಗಸಭೆ ಭಾರತಕ್ಕೆ ಗೇಮ್ ಚೇಂಜರ್ ಆಗಲಿದೆ. ಇದು ಅನೇಕ ದೇಶಗಳಿಗೆ ತಾಂತ್ರಿಕ ಆವಿಷ್ಕಾರವನ್ನು ತೋರಿಸಲು ವೇದಿಕೆಯಾಗಿ ಸೃಷ್ಟಿಯಾಗಿದೆ. ಇಲ್ಲಿ ಸ್ಟಾರ್ಟ್‌ಅಪ್‌ಗಳು ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ನೋಡುತ್ತಿದ್ದೇನೆ. ವೈಜ್ಞಾನಿಕ ಬೆಳವಣಿಗೆಗಳ ಮಾರ್ಗಸೂಚಿಯಾಗಿ ಈ ಶೃಂಗಸಭೆ ಹೊರಹೊಮ್ಮಿದೆ ಎಂದು ಡಿ.ಆರ್.ಡಿ.ಓ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವ್ಯವಸ್ಥೆಗಳ ಮಹಾನಿರ್ದೇಶಕ ಬಿ ಕೆ ದಾಸ್ ಹೇಳಿದರು.
ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆಯ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ಟ್‌ಅಪ್ ಭಾರತದ ಭವಿಷ್ಯವಾಗಿದೆ. ಹೊಸ ಪೀಳಿಗೆಯು ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳು ಭಾರತವನ್ನು ಮುನ್ನಡೆಸಲಿವೆ. ಅವರಿಗೆ ತಾಂತ್ರಿಕ ಸಹಾಯ ಮತ್ತು ಸರಬರಾಜು ಸರಪಳಿಯನ್ನು ಸರಿಪಡಿಸುವುದು ಮುಖ್ಯವಾಗಿದೆ. ವಾಸ್ತವದಲ್ಲಿ ಸ್ಟಾರ್ಟ್ ಅಪ್ಗಳಿಗೆ ಕನಸುಗಳಿವೆ. ಇದರ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಇವು ಎಲ್ಲವನ್ನು ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಪೂರೈಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಹೆಚ್ಚಿನ ಸ್ಟಾಲ್‌ಗಳು ಉತ್ತಮ ಐಡಿಯಾಗಳಿಂದ ಕೂಡಿವೆ. ಇದರಲ್ಲಿ ಡಿ.ಆರ್.ಡಿ.ಓ ಸಹ ಉತ್ಪನ್ನಗಳ ಹೊಸ ಶ್ರೇಣಿಯನ್ನು ಪರಿಚಯಿಸಿ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿದೆ ಎಂದು ಹೇಳಿದರು.
ಡಿ.ಆರ್.ಡಿ.ಓ ಉತ್ಪನ್ನಗಳು ಸಹ ಸಾಕಷ್ಟು ರಫ್ತು ಸಾಮರ್ಥ್ಯವನ್ನು ಹೊಂದಿವೆ. ನಮ್ಮ ಫೈಟರ್ ಏರ್‌ಕ್ರಾಫ್ಟ್, ಎಲ್.ಸಿ.ಎ, ಇ.ಡಬ್ಲ್ಯೂ ಸಿಸ್ಟಮ್‌ಗಳು, ಫೈಟರ್ ಏರ್‌ಕ್ರಾಫ್ಟ್‌ಗಾಗಿನ ಎಲೆಕ್ಟ್ರಾನಿಕ್ಸ್ ಸ್ಕ್ಯಾನ್ ರೆಡಾರ್, ಎಲೆಕ್ಟ್ರೋಟ್ರಾಪಿಕ್ ಸಿಸ್ಟಮ್ಸ್ ಸಂವಹನ, ಬಯೋಮೆಡಿಕಲ್ ಎಂಜಿನಿಯರಿಂಗ್ ಉಪಕರಣಗಳು, ಆಮ್ಲಜನಕ ವ್ಯವಸ್ಥೆಗಳು, ತಪಸ್ ಯು.ಎ.ವಿಗಳ ಎಲ್ಲ ಸರಣಿಗಳನ್ನು ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಡಿ.ಆರ್.ಡಿ. ಓ ಅಭಿವೃದ್ಧಿಪಡಿಸಿದೆ. ಹಾಗಾಗಿ ನಮ್ಮ ಈ ರಕ್ಷಣಾ ಸಂಶೋಧನಾ ಸಂಸ್ಥೆಯು ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ಜೊತೆಗೆ ಉದ್ಯಮಗಳ ಕೈ ಹಿಡಿಯುವ ಕೆಲಸವನ್ನು ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಾ ನಾವು ಹೊಸ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ, ನಮ್ಮ ಕೆಲಸದ ಪ್ರಮುಖ ಕ್ಷೇತ್ರ ರೆಡಾರ್ ಆಗಿದೆ. ರಾಡಾರ್ ಮುಂದಿನ ಸಂಭಾವ್ಯ ತಂತ್ರಜ್ಞಾನ ಬೆಳವಣಿಗೆಯ ಚಾಲಕನಂತಿದೆ. ಅದರ ಮೂಲಕ ನಾವು ಅನೇಕ ವೈಜ್ಞಾನಿಕ ಮತ್ತು ರಕ್ಷಣಾ ಅವಶ್ಯಕತೆಗಳನ್ನು ಪೂರೈಸಲು ಮುಂದಾಗಿದ್ದೇವೆ ಎಂದು ದಾಸ್ ತಿಳಿಸಿದರು. ನಾವು ಅಭಿವೃದ್ಧಿಪಡಿಸಿರುವ ರಾಡಾರ್ಗಳು ಉತ್ತಮ ತಂತ್ರಜ್ಞಾನಗಳನ್ನು ಬಳಸಿಕೊಂಡು ಬ್ಯಾಲಿಸ್ಟಿಕ್, ಹೆಚ್ಚಿನ ವೇಗದ ರಾಕೆಟ್‌ಗಳನ್ನು ಉತ್ತ ನಿಖರತೆಯೊಂದಿಗೆ ಸುಲಭವಾಗಿ ಟ್ರ್ಯಾಕ್ ಮಾಡುತ್ತದೆ. ನಮ್ಮ ಉತ್ಪನ್ನಗಳು ಗುಣಮಟ್ಟದ ಉತ್ಪನ್ನಗಳೆಂದು ಸಾಬೀತಾಗಿದೆ ಮತ್ತು ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ. ಹಲವು ಪಾಲುದಾರರ ಸಹಾಯದಿಂದ ಸಾವಿರಾರು ಸಂಖ್ಯೆಯಲ್ಲಿ ಉತ್ಪಾದನೆ ನಡೆಯುತ್ತಿದೆ ಮತ್ತು ಈಗಾಗಲೇ ಭಾರತೀಯ ಸೇನೆಯು ನಮ್ಮ ರೆಡಾರ್‌ಗಳನ್ನು ಬಳಸುತ್ತಿದೆ. ಹೀಗಾಗಿ ಡಿ.ಆರ್.ಡಿ.ಓ ರೆಡಾರ್‌ಗಳ ರಫ್ತು ಸಾಮರ್ಥ್ಯ ಏರುಗತಿಯಲ್ಲಿದೆ ಎಂದು ದಾಸ್ ಮಾಹಿತಿ ನೀಡಿದರು.
ಈ ರೆಡಾರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಮದು ಮಾಡಿಕೊಂಡ ದೇಶಗಳು ಸಾಕಷ್ಟಿವೆ. ರಕ್ಷಣಾ ಮತ್ತು ಪ್ರದೇಶದ ಟ್ರ್ಯಾಕಿಂಗ್‌ಗೆ ವೆಚ್ಚ ಕಡಿಮೆಯಿದೆ, ನಿಖರತೆಯ ಕಾರಣದಿಂದಾಗಿ ಹಲವು ದೇಶಗಳು ಈಗಾಗಲೇ ನಮ್ಮ ರೆಡಾರ್ ಸಿಸ್ಟಮ್‌ಗಳ ವಿವರಗಳನ್ನು ತೆಗೆದುಕೊಂಡಿವೆ. ಆದ್ದರಿಂದ ಡಿ.ಆರ್.ಡಿ. ಓ ನಿರಂತರ ಅಭಿವೃದ್ಧಿ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಭಾರತ ತಂತ್ರಜ್ಞಾನವನ್ನು ಅತ್ಯಂತ ವೇಗವಾಗಿ ಅಳವಡಿಸಿಕೊಂಡ ಪ್ರಮುಖ ರಾಷ್ಟ್ರ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್