ಬೆಂಗಳೂರು: ಹೊಸ ಗುಡ್ಡದಹಳ್ಳಿ ಬಳಿಯ ಗೋಡೌನ್ನಲ್ಲಿ ಸಂಭವಿಸಿದ ಅಗ್ನಿ ಅವಘಡವನ್ನು ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಪೂರ್ತಿಯಾಗಿ ನಂದಿಸಿ, ಕಾರ್ಯಾಚರಣೆ ಕೈಗೊಂಡಿದ್ದಾರೆ. ಮತ್ತೊಂದೆಡೆ ಗೋಡೌನ್ ಮಾಲೀಕರನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸುಧಾಕರ್, ಫ್ಯಾಕ್ಟರಿ ಬಳಿ ಹಾಗೂ ಸುತ್ತ - ಮುತ್ತಲು ಹಾನಿಯಾದವರ ಬಳಿ ಮಾತುಕತೆ ನಡೆಸಿದರು. ಅಧಿಕಾರಿಗಳ ಜೊತೆ ಮಾತನಾಡಿ, ಗೋಡೌನ್ ಅನುಮತಿ ಬಗ್ಗೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಮಾಹಿತಿ ಪಡೆದಿದ್ದಾರೆ.
ಇನ್ನೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣಿಸುತ್ತಿದೆ, ಸ್ಥಳಕ್ಕೆ ಗೃಹ ಸಚಿವರು ಬಂದು ಹೋಗಿದ್ದಾರೆ, ನಾನು ಸ್ಥಳಕ್ಕೆ ಬಂದಿದ್ದೇನೆ, ಆದರೂ ನೀವ್ಯಾರು ಇಲ್ಲಿಗೆ ಬಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದರು.
ಗೋಡೌನ್ ಸ್ಯಾನಿಟೈಸರ್ ಉತ್ಪಾದನೆ ಮಾಡಲು ಅನುಮತಿ ಪಡೆದಿತ್ತಾ ಎನ್ನುವ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಸಚಿವ ಡಾ. ಸುಧಾಕರ್ ಮಾತನಾಡಿ, ಅನುಮತಿ ಇಲ್ಲದೇ ಅನಧಿಕೃತವಾಗಿ ಸ್ಯಾನಿಟೈಸರ್ ದಾಸ್ತಾನು ಇಟ್ಟಿದ್ರೆ ಅದು ಅಪರಾಧ. ಇವರಿಂದ ಯಾವುದೇ ಕಂಪನಿಗಳು ಸ್ಯಾನಿಟೈಸರ್ ಖರೀದಿ ಮಾಡಿದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಇಲಾಖೆಯಿಂದ ಸ್ಯಾನಿಟೈಸರ್ ವಿಚಾರವಾಗಿ ಯಾವುದೇ ಅನುಮತಿ ಪಡೆದಿಲ್ಲ. ಹಾಗಾಗಿ ತನಿಖೆ ಮುಂದುವರೆಯುತ್ತೆ ಎಂದು ಸಚಿವರು ತಿಳಿಸಿದರು.