ಬೆಂಗಳೂರು : ಕೋವಿಡ್ ಸೋಂಕಿನಿಂದ ಗುಣಮುಖರಾದವರೆಲ್ಲರೂ ಕ್ಷಯರೋಗಲಕ್ಷಣ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ ಬಂದಿರೋರೆಲ್ಲಾ ಕ್ಷಯ ರೋಗಿಗಳು ಅಂತಲ್ಲ. ಮೊದಲೇ ತಪಾಸಣೆ ಮಾಡಿಸಿಕೊಂಡ್ರೆ ಅದನ್ನ ಆರಂಭದಲ್ಲೇ ತಡೆಯಬಹುದು. ಶೇ.3.9ರಷ್ಟು ಜನರಿಗೆ ಕ್ಷಯ ರೋಗವಿತ್ತು.
2019-20ರಲ್ಲಿ ತಪಾಸಣೆ ಮಾಡಿದಾಗ ಕಡಿಮೆಯಾಗಿದೆ. ಕೋವಿಡ್ ಬಂದ ಹಿನ್ನೆಲೆ ತಪಾಸಣೆ ಕಡಿಮೆ ಮಾಡಲಾಗಿತ್ತು. 1.25ಕೋಟಿ ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. 79,938 ಜನರ ಪೈಕಿ, 2,714 ಜನರಿಗೆ ಪಾಸಿಟಿವ್ ಬಂದಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ಇದನ್ನು ಸಾಂಕ್ರಾಮಿಕ ರೋಗ ಅಂತಾ ಹೇಳಲು ಸಾಧ್ಯವಿಲ್ಲ. ಆದ್ರೆ, ವ್ಯಕ್ತಿ ಇಂದ ಮನೆಯವರಿಗೆ ಬರುವ ಸಾಧ್ಯತೆ ಇದೆ. ಕೆಲಸ ಮಾಡುವ ಸ್ಥಳದಿಂದಲೂ ಬರುವ ಸಾಧ್ಯತೆ ಇದೆ. ಯಾರು ಎರಡು ವಾರಕ್ಕೂ ಹೆಚ್ಚು ಸಮಯ ಕೆಮ್ಮುತ್ತಾರೆಯೋ ಅವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಮ್ಮಿದ್ದರೆ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ರಾತ್ರಿ ವೇಳೆ ಜ್ವರ ಬರುವ ಸಾಧ್ಯತೆ ಇದೆ. ತೂಕ ಕೂಡ ಕಡಿಮೆಯಾಗಲಿದೆ ಎಂದು ವಿವರಿಸಿದರು.
ದೇಶದಲ್ಲೇ ಕರ್ನಾಟಕ ಸರ್ಕಾರ ವಿನೂತನ ಪ್ರಯತ್ನ ಮಾಡುತ್ತಿದೆ. ಕೋವಿಡ್ ಬಂದವರಿಂದ ಕ್ಷಯ ಪತ್ತೆ ಹಚ್ಚಬೇಕಿದೆ. ಇದೇ ಆ.14ರಿಂದ 30ರವರೆಗೂ ತಪಾಸಣೆ ನಡೆಯಲಿದೆ. 28 ಲಕ್ಷ ಜನ ಇದರಿಂದ ಗುಣಮುಖರಾಗಿದ್ದಾರೆ. ಕೋವಿಡ್ನಲ್ಲಿ ಕಪ್ಪು ಶಿಲೀಂಧ್ರಗಳ ಪತ್ತೆ ಮಾಡುವ ತಪಾಸಣೆ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಕ್ಷಯರೋಗ ಪತ್ತೆ ಮಾಡಲಾಗುವುದು ಎಂದರು.
ಶ್ವಾಸಕೋಶ ಸೋಂಕಿನಿಂದ ಕ್ಷಯ ರೋಗ ಬರುತ್ತದೆ. ಕಳೆದ ಐದು ವರ್ಷದಿಂದ ಈ ರೋಗ ಹೆಚ್ಚಾಗಿದೆ. ಶೇ.33ರಷ್ಟು ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈವರೆಗೂ ನಾವು ಯಾವ್ಯಾವ ವೃತ್ತಿಯಲ್ಲಿ ಹೆಚ್ಚು ಬರಲಿದೆ ಅಂತಾ ತಪಾಸಣೆ ಮಾಡಿದ್ದೇವೆ. ಆರ್ಥಿಕ ಸ್ಥಿತಿಗತಿಗಳ ಪ್ರಕಾರವೂ ಸರ್ವೇ, ತಪಾಸಣೆ ಮಾಡಲಾಗಿದೆ. ಇದರ ಜೊತೆಯಲ್ಲಿ ಕೋವಿಡ್ ಬಂದವರಲ್ಲೂ ತಪಾಸಣೆ ಮಾಡಲಾಗ್ತಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇದನ್ನ ಮಾಡಲಾಗ್ತಿದೆ ಎಂದು ತಿಳಿಸಿದರು.
3ನೇ ಅಲೆ ಬಂದರೆ ಮಕ್ಕಳ ಮೇಲೆ ಪರಿಣಾಮ ಬೀರುವುದು ಅಂತಾ ಹೇಳಲಾಗಿದೆ. ಈ ಸಂಬಂಧ ಹೊಸ ಕಾರ್ಯಕ್ರಮ ಘೋಷಣೆ ಮಾಡಲಾಗುವುದು. ಆರೋಗ್ಯ ನಂದನ ಹೆಸರಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇದರ ಅಡಿ ಎಲ್ಲಾ ಮಕ್ಕಳಿಗೆ ತಪಾಸಣೆ ಮಾಡಲಾಗುವುದು. ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡಲಾಗುವುದು ಎಂದರು.
ನೋವು ತರಿಸಿದೆ : ಮಂಗಳೂರಿನಲ್ಲಿ ಸೋಂಕಿಗೆ ಹೆದರಿ ಇಬ್ಬರು ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ನೋವಿನ ಸಂಗತಿ. ಸೋಂಕು ಬಂದ ಕೂಡಲೇ ಯಾರು ಸಾಯುವುದಿಲ್ಲ. ಮಾಹಿತಿ ಕೊರತೆ ಇರಬಹುದು. ಅನೇಕರು ಸೋಂಕು ಬಂದು ಗುಣಮುಖರಾಗಿದ್ದಾರೆ. ಈ ಘಟನೆ ವೈಯಕ್ತಿಕವಾಗಿ ನೋವು ತರಿಸಿದೆ. ದಂಪತಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರೋದು ಸರಿಯಲ್ಲ ಎಂದರು.
ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು : ಯಾರಿಗಾದರೂ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಇಲಾಖೆ, ವೈದ್ಯರು ನಿಮ್ಮ ಜೊತೆ ಇರ್ತಾರೆ. ಒಂದೂವರೆ ವರ್ಷದಲ್ಲಿ ಅನೇಕ ಪಾಠ ಕಲಿತಿದ್ದೇವೆ. ಯಾರೂ ಕೂಡ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಡಿ. ಸಂಪೂರ್ಣ ಲಸಿಕೆ ಪಡೆಯೋವರೆಗೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮುಂದೆ ಮತ್ತೆ ಅಪಾಯ : ಜನಪ್ರತಿನಿಧಿಗಳಿಂದ ಕೊರೊನಾ ನಿಯಮ ಉಲ್ಲಂಘನೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆರೋಗ್ಯ ಸಚಿವನಾಗಿ ಮನವಿ ಮಾಡ್ತೇನೆ. ಯಾವುದೇ ರೀತಿಯಲ್ಲಿ ಗುಂಪು ಚಟುವಟಿಕೆ ಮಾಡಬೇಡಿ. ಜನಸಾಮಾನ್ಯರೇ ಆಗಿರಲಿ, ಯಾರೇ ಮಂತ್ರಿ ಆಗಿರಲಿ ಮಾಡಬೇಡಿ. ಎಚ್ಚೆತ್ತುಕೊಳ್ಳದಿದ್ರೆ ಮುಂದೆ ಮತ್ತೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದರು.
ಓದಿ: ಆಗಸ್ಟ್ 19 ರಿಂದ ಶುರುವಾಗಲಿದೆ ದ್ವಿತೀಯ ಪಿಯುಸಿ ಪರೀಕ್ಷೆ; ಆ ಭಾಗದಿಂದ ಬರೋರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ..