ಬೆಂಗಳೂರು: ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಇತರೆ ಯಾವುದೇ ಮಾಧ್ಯಮದ ಮೂಲಕ ತಪ್ಪು ಮಾಹಿತಿ ನೀಡಿ ಜನತೆಯಲ್ಲಿ ಆತಂಕ ಸೃಷ್ಟಿಸಲು ಮುಂದಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳ ಬದ್ಧತೆ ಮತ್ತು ಕಾರ್ಯವೈಖರಿಯಿಂದ ನಮ್ಮ ರಾಜ್ಯದಲ್ಲಿ ಈ ಸೋಂಕು ಬರದಿರುವಂತೆ ನಾವು ನೋಡಿಕೊಂಡಿದ್ದೇವೆ. ಹಾಗಾಗಿ ಈ ಕ್ಷಣದವರೆಗೂ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರವೇಶ ಮಾಡಿಲ್ಲ. ಹಾಗಾಗಿ ಯಾವುದೇ ರೀತಿಯಲ್ಲಿಯೂ ವಸ್ತುಸ್ಥಿತಿಗೆ ದೂರವಾದ ಮಾಹಿತಿ ಹಾಗೂ ಸೆನ್ಸೇಷನಲ್ ವಿಷಯ ಮಾಡಲು ಹೋಗಬಾರದು. ಕೇರಳದಲ್ಲಿ ಸೋಷಿಯಲ್ ಮೀಡಿಯಾ ಹಾಗೂ ಇತರೆ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ನೀಡಿ ಆತಂಕವನ್ನುಂಟು ಮಾಡುವ ಕೆಲಸ ಮಾಡಲಾಗಿದೆ. ಅಂತಹ ಕೆಲಸವನ್ನು ಇಲ್ಲಿ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಎಲ್ಲಾ ಕನ್ನಡಿಗರು ಹಾಗೂ ರಾಜ್ಯದಲ್ಲಿ ವಾಸ ಮಾಡುವ ಪ್ರತಿಯೊಬ್ಬ ಪ್ರಜೆಯೂ ಕೂಡ ಅತ್ಯಂತ ಆರೋಗ್ಯವಾಗಿರಬೇಕು. ಮಾನಸಿಕವಾಗಿ, ದೈಹಿಕವಾಗಿ ಅವರು ನೆಮ್ಮದಿಯಿಂದ ಇರಬೇಕು ಎನ್ನುವುದು ನಮ್ಮ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲೇ ನಾವು ಮುನ್ನಡೆಯಲಿದ್ದೇವೆ ಎಂದರು.
ಕೇವಲ ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಆ ತಂಡ ಕೊರೊನಾ ವೈರಸ್ ಪ್ರಕರಣಗಳ ಕುರಿತು ಮಾನಿಟರಿಂಗ್ ಮಾಡಲಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಹರ್ಷವರ್ಧನ್ ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಹೊಸದಾಗಿ 25 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಜೈಪುರದಲ್ಲಿ ಇಟಲಿಯ 16 ಮಂದಿಯಲ್ಲಿ ಪತ್ತೆಯಾಗಿದೆ. ಅವರಲ್ಲಿ ಒಬ್ಬರು ಭಾರತೀಯರು, ಕೇರಳದ ಮೂವರಲ್ಲಿ ಕೊರೊನಾ ಲಕ್ಷಣ ಪತ್ತೆಯಾಗಿತ್ತು. ಅವರೆಲ್ಲಾ ಸಂಪೂರ್ಣ ಗುಣಮುಖರಾಗಿದ್ದಾರೆ. ಅದೇ ರೀತಿ ರಾಜ್ಯದಲ್ಲಿ 273 ಮಂದಿ ಮೇಲೆ ಶಂಕೆ ಇತ್ತು. ಅವರಲ್ಲಿ 253 ಮಂದಿಗೆ ನೆಗೆಟಿವ್ ಅಂತ ವರದಿ ಬಂದಿದೆ. ಉಳಿದವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದರು.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ಕೇಂದ್ರದಲ್ಲಿ 5 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಇಬ್ಬರಿಗೆ ನೆಗೆಟಿವ್ ಅಂತ ವರದಿ ಬಂದಿದೆ. ಉಳಿದ ಮೂರು ಮಂದಿಯ ವರದಿ ಬರಬೇಕಿದೆ. ಕೊರೊನಾ ವೈರಸ್ ಬಗ್ಗೆ ಪ್ರತಿದಿನ 6 ಗಂಟೆಗೆ ನಾವು ಮಾಹಿತಿ ಕೊಡುತ್ತೇವೆ. ನಾವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರ ಕೊಡುತ್ತೇವೆ ಎಂದು ಹೇಳಿದರು.