ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸೋಂಕಿತರ ಸಂಪರ್ಕ ಇರುವವರನ್ನ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಆದರೆ ಹೋಮ್ ಕ್ವಾರಂಟೈನ್ನಲ್ಲಿ ಇರಬೇಕಾದ ಶಂಕಿತರು ಎಲ್ಲಾ ಕಡೆ ಓಡಾಡೋಕೆ ಆರಂಭಿಸಿದ್ದರು. ಇವರನ್ನ ಕ್ವಾರಂಟೈನ್ ಮಾಡುವುದೇ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವು ಆಗಿತ್ತು. ಹೀಗಾಗಿಯೇ ಶಂಕಿತರನ್ನು ಹೋಮ್ ಕ್ವಾರಂಟೈನ್ ಬದಲು ಹೋಟೆಲ್ ಕ್ವಾರಂಟೈನ್ ಮಾಡಲು ಇಲಾಖೆ ಪ್ಲಾನ್ ಮಾಡಿತ್ತು.
ಇದಕ್ಕಾಗಿ ನಗರದ ಹೋಟೆಲ್ಗಳ ಪಟ್ಟಿ ಮಾಡಿ, ಶಂಕಿತರನ್ನ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಆದರೆ ಈಗ ಇದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ನಗರದ ಮೆಜೆಸ್ಟಿಕ್ನಲ್ಲಿ 50ಕ್ಕೂ ಹೆಚ್ಚು ಲಾಡ್ಜ್ ಕಂ ಹೋಟೆಲ್ಗಳು ಇವೆ. ಈಗಾಗಲೇ ನಿಗದಿತ ಹೋಟೆಲ್ಗಳಲ್ಲಿ ಶಂಕಿತರನ್ನ ಇಡಲಾಗಿದೆ. ಆದರೆ ಮೆಜೆಸ್ಟಿಕ್ನ ಕಾಟನ್ ಪೇಟೆಯಲ್ಲಿ ಕರ್ಮಷಿಯಲ್ ಏರಿಯಾದ ಜೊತೆಗೆ ಮನೆಗಳೂ ಇವೆ. ಹೀಗಾಗಿ ಇಲಾಖೆ ಗುರುತಿಸಿರುವ ಹಲವು ಹೋಟೆಲ್ಗಳ ಪಕ್ಕದಲ್ಲೇ ಮನೆಗಳು ಇರುವುದರಿಂದ ಕ್ವಾರಂಟೈನ್ಗೆ ಶಂಕಿತರನ್ನು ಇಡುವುದು ಬೇಡ ಅಂತ ವಿರೋಧ ವ್ಯಕ್ತವಾಗಿದೆ.
ನಮ್ಮ ಏರಿಯಾಗೆ ಕೊರೊನಾ ಶಂಕಿತರನ್ನು ತರಬೇಡಿ ಅಂತ ಸ್ಥಳೀಯರು ಪೊಲೀಸರಿಗೆ ಮನವಿ ಮಾಡುತ್ತಿದ್ದಾರೆ. ಕಾಟನ್ ಪೇಟೆ ಮುಖ್ಯ ರಸ್ತೆಯಲ್ಲಿರುವ ಲಕ್ಕಿ ಇನ್ ಲಾಡ್ಜ್ಗೆ ಪಾದರಾಯನಪುರದ ಶಂಕಿತರನ್ನ ಕರೆ ತರಲಾಗಿದೆ. ಆದರೆ ಈ ವಿಷಯ ತಿಳಿದ ಸ್ಥಳೀಯರು ಗುಂಪು ಗುಂಪಾಗಿ ಬಂದು ಯಾವುದೇ ಕಾರಣಕ್ಕೂ ಇಲ್ಲಿ ಕೊರೊನಾ ಶಂಕಿತರನ್ನು ಕರೆ ತರದಂತೆ ಜಿದ್ದಿಗೆ ಬಿದ್ದಿದ್ದಾರೆ.
ನಂತರ ಸ್ಥಳೀಯರ ಒತ್ತಡಕ್ಕೆ ಸಿಲುಕಿದ ನಂತರ ಅವರೆನ್ನೆಲ್ಲ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಒಟ್ಟಿನಲ್ಲಿ ಜನರಿಗೆ ಕೊರೊನಾ ವೈರಸ್ ಎಷ್ಟು ಆತಂಕ ಸೃಷ್ಟಿ ಮಾಡಿದ್ಯೋ, ಅಷ್ಟೇ ಕೊರೊನಾ ಶಂಕಿತರಿಗೂ ಜನ ಭಯ ಪಡುವ ಸ್ಥಿತಿ ಉಂಟಾಗಿದೆ.