ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಕೆಮ್ಮು, ಶೀತ ಮತ್ತು ಜ್ವರದ ಲಕ್ಷಣಗಳು ಕಂಡು ಬಂದರೆ ಯಾವುದೇ ಕಾರಣಕ್ಕೂ ನ್ಯಾಯಾಲಯಗಳ ಆವರಣ ಪ್ರವೇಶಿಸಬಾರದು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ನ್ಯಾಯಪೀಠಗಳಿಗೆ ಮತ್ತು ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ಅನ್ವಯವಾಗುವಂತೆ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಅವರ ಆದೇಶಾನುಸಾರ ಜ್ಞಾಪನಾ ಪತ್ರವನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಹೊರಡಿಸಿದ್ದಾರೆ.
ತುರ್ತು ಪ್ರಕರಣಗಳನ್ನು ಹೊರತುಪಡಿಸಿ, ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ ವಕೀಲರು ಹಾಗೂ ಕಕ್ಷಿದಾರರು ಹಾಜರಾಗಬಾರದು ಎಂದು ವಕೀಲರ ಸಂಘ ನಿರ್ಣಯ ಕೈಗೊಂಡಿರುವ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಲಾಗಿದೆ. ಆದರೆ, ಕೋರ್ಟ್ ಕಲಾಪ ನಡೆಸುವುದು ಅಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗದ ಹೊರತು ಕೋರ್ಟ್‌ಗಳನ್ನು ಸಂಪೂರ್ಣವಾಗಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸುಪ್ರೀಂಕೊರ್ಟ್ ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ಕಾಣಿಸಿಕೊಂಡಿರುವ ವಕೀಲರು ನ್ಯಾಯಾಲಯಗಳ ಆವರಣ ಪ್ರವೇಶಿಸಬಾರದು ಎಂದು ಜ್ಞಾಪನಾ ಪತ್ರದಲ್ಲಿ ವಿವರಿಸಲಾಗಿದೆ.