ಬೆಂಗಳೂರು: ರಾಜ್ಯ ಮಟ್ಟದ ರೈತ ಸಮ್ಮೇಳನವನ್ನು ಅ.10ರಂದು ಮಂಡ್ಯದಲ್ಲಿ ನಡೆಸಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದೆವು. ಆದರೆ, ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ.
ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸೇರಿ ಹಲವು ನಾಯಕರು ಪಕ್ಷಾತೀತವಾಗಿ ಪಾಲ್ಗೊಳ್ಳಲಿದ್ದಾರೆ. ದೇಶದಲ್ಲಿ ರೈತರ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತರನ್ನು ಬಂಡವಾಳಶಾಹಿಗಳ ಕೈಯಲ್ಲಿ ಇಡಲು ಮುಂದಾಗಿದೆ.
ರಾಷ್ಟ್ರಮಟ್ಟದಲ್ಲಿ ಈಗಾಗಲೇ ಪ್ರತಿಭಟನೆ ಮಾಡಿದ್ದೇವೆ. ಎಐಸಿಸಿ ಆದೇಶದ ಮೇರೆಗೆ ರಾಜ್ಯ ಮಟ್ಟದ ಕಿಸಾನ್ ಕಾಂಗ್ರೆಸ್ ಕಾರ್ಯಕ್ರಮ ಮಾಡಲು ಸಂದೇಶ ತಿಳಿಸಿದೆ. ರಾಷ್ಟ್ರಮಟ್ಟದಲ್ಲಿ ಸಿಗ್ನೇಚರ್ ಕ್ಯಾಂಪೇನ್ ಮಾಡಲು ಸೋನಿಯಾ ಗಾಂಧಿ ಅವರು ಆದೇಶ ನೀಡಿದ್ದಾರೆ. ಎರಡು ಕೋಟಿ ಸಿಗ್ನೇಚರ್ ಮಾಡಿಸಿಲು ತಿಳಿಸಿದ್ದಾರೆ. ನಮ್ಮ ರಾಜ್ಯದಿಂದ ಅತಿಹೆಚ್ಚು ರೈತರು, ಜನಸಾಮಾನ್ಯರು ಭಾಗವಹಿಸಿಬೇಕಾಗಿದೆ ಎಂದರು.
ಸಿಬಿಐ ದಾಳಿ ಪ್ರಸ್ತಾಪ: ಸಿಬಿಐ ವಿಚಾರ ಪ್ರಸ್ತಾಪಿಸಿ, ದಿಲ್ಲಿ ನಿವಾಸದಲ್ಲಿ ₹1.5 ಲಕ್ಷ, ನನ್ನ ಮನೆ ₹1.75 ಲಕ್ಷ, ಕಚೇರಿಯಲ್ಲಿ ₹3.5 ಲಕ್ಷ, ತಾಯಿ ಮನೆಯಲ್ಲಿ ಏನೂ ತೆಗೆದುಕೊಂಡು ಹೋಗಿಲ್ಲ ಎಂದು ಪಂಚನಾಮೆಯಲ್ಲಿ ತಿಳಿಸಿದ್ದಾರೆ. ಮುಂಬೈನಲ್ಲಿ ಮಗಳದ್ದೊಂದು ಮನೆಯಿದೆ. ಆರು ವರ್ಷದಿಂದ ಅಲ್ಲಿಗೆ ಹೋಗಿಲ್ಲ.
ದಿಲ್ಲಿಯಲ್ಲಿ ಎರಡು ಮನೆ ಇದೆ. ನನ್ನ ಸಹೋದರ ಶಶಿಕುಮಾರ್ ಮನೆಯಲ್ಲಿ ಏನೂ ಸಿಕ್ಕಿಲ್ಲ. ಸ್ನೇಹಿತ ಸಚಿನ್ ನಾರಾಯಣ್ ಮನೆಯಲ್ಲಿ ₹50 ಲಕ್ಷ ಸಿಕ್ಕಿದೆಯಂತೆ, ಮಾತಾಡಿಲ್ಲ. ಧವನಂ ಜ್ಯುವೆಲರ್ಸ್‌ನ ಮೇಲೆ ದಾಳಿ ಆಗಿದೆ. ಅಲ್ಲೂ ಏನೂ ಸಿಕ್ಕಿಲ್ಲ.
ನಾವು ಏನನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ. ನನ್ನ ಮೇಲೆ ಮಾತ್ರ ಎಫ್ಐಆರ್ ಆಗಿದೆ. ಬೇರೆಯವರ ಮೇಲಿಲ್ಲ. ನನಗೆ ಇನ್ನೂ ಯಾವುದೇ ಸಮನ್ಸ್ ನೀಡಿಲ್ಲ. ನೋಡಬೇಕು ಮುಂದಿನ ಹೋರಾಟದ ಬಗ್ಗೆ ಈಗ ಮಾತಾಡಲ್ಲ. ನಮ್ಮ ವಕೀಲರ ಜತೆ ಚರ್ಚಿಸುತ್ತಿದ್ದೇನೆ. ಈಗ ಯಾವುದನ್ನು ಸ್ಪಷ್ಟಪಡಿಸಲ್ಲ ಎಂದರು.
ಪ್ರಹ್ಲಾದ್ ಜೋಶಿ ವಿರುದ್ಧ ತಿರುಗೇಟು : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊದಲು ತಮ್ಮ ಪಕ್ಷದ ನಾಯಕರ ಬಗ್ಗೆ ಗಮನಹರಿಸಲಿ. ಉಳಿದ ನಾಯಕರ ಬಗ್ಗೆ ಮಾತನಾಡುವ ಮುನ್ನ ತಮ್ಮವರ ಬಗ್ಗೆ ಗಮನ ಹರಿಸಲಿ ಎಂದು ತಿರುಗೇಟು ನೀಡಿದರು.
ದಿಲ್ಲಿಗೆ ಪಟ್ಟಿ ಹೋಗಿದೆ. ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಪಟ್ಟಿಯನ್ನು ಹೈಕಮಾಂಡ್‌ಗೆ ಕಳಿಸಿಕೊಟ್ಟಿದ್ದೇವೆ. ಅಲ್ಲಿಂದ ಈವರೆಗೂ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಆದಷ್ಟು ಶೀಘ್ರ ಪಟ್ಟಿ ಲಭಿಸುವ ನಿರೀಕ್ಷೆ ಇದೆ.
ರಾಜರಾಜೇಶ್ವರಿನಗರ ಉಪಚುನಾವಣೆಗೆ ಕುಸುಮ ಅವರೇ ಕಾಂಗ್ರೆಸ್ ಅಭ್ಯರ್ಥಿ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಸಿದ್ದರಾಮಯ್ಯ ಮೈಸೂರಲ್ಲಿ ಈ ವಿಚಾರವಾಗಿ ಯಾವ ಮಾಹಿತಿ ನೀಡಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ನಮ್ಮ ಸಿಎಲ್ಪಿ ನಾಯಕರು. ಅವರಿಗೆ ಯಾವ ರೀತಿಯ ಮಾಹಿತಿ ಲಭಿಸಿದೆ ಎನ್ನುವುದನ್ನು ತಿಳಿದುಕೊಳ್ಳುತ್ತೇನೆ. ಅವರೊಂದಿಗೆ ಸಮಾಲೋಚಿಸಿ ಸ್ಪಷ್ಟಪಡಿಸುತ್ತೇನೆ ಎಂದರು.
ನನ್ನ ಪಿಎ ಅವರನ್ನ ಯಾಕೆ ಹೊಡೆದರು ಅನ್ನೋದು ಗೊತ್ತಿಲ್ಲ. ಈ ವಿಚಾರವನ್ನು ನನ್ನ ಪತ್ನಿ ನನಗೆ ಹೇಳಿದರು. ಪರಮೇಶ್ವರ್ ಪಿಎ ರೀತಿ ಆದ್ರೆ ಕಷ್ಟ. ನೀವೆಲ್ಲ ರಮೇಶ್ ಕೇಸ್ ನೋಡಿದ್ದೀರಿ. ನಮ್ಮ ಕಣ್ಣು ಮುಂದೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.