ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಲಗ್ಗೆರೆಯಲ್ಲಿ ಇಂದು ರಾತ್ರಿ ಚುನಾವಣಾ ಪ್ರಚಾರ ನಡೆಸಿದರು. ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕುಸುಮ ಹನುಮಂತರಾಯಪ್ಪ ಪರ ಮಧ್ಯಾಹ್ನದ ನಂತರ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ ನಡೆಸಿದರು.
ಇವರಿಗೆ ಇದೇ ಸಂದರ್ಭ ಮಾಜಿ ಸಚಿವ ಚಲುವರಾಯಸ್ವಾಮಿ, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ.ಎಚ್ ಅವರ ತಂದೆ, ಮುಖಂಡ ಹನುಮಂತರಾಯಪ್ಪ ಸಾಥ್ ಕೊಟ್ಟರು.
ಲಗ್ಗೆರೆ ವಾರ್ಡ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿ, ಇಲೆಕ್ಷನ್ ಕಮಿಷನ್ನವರು ನನಗೆ ನೊಟೀಸ್ ಕೊಟ್ಟಿದ್ರು. ಮುನಿರತ್ನ ನೋಟು, ಕುಸುಮಾಗೆ ಓಟು ಅಂತ ಹೇಳಿದ್ದೆ. ಮುನಿರತ್ನ ಮನೆ ಮನೆಗೂ ಸೆಟ್ ಟಾಪ್ ಬಾಕ್ಸ್ ಕೊಟ್ಟು ಅವರ ಫೋಟೋ ಬರೋ ತರ ಮಾಡಿದ್ದಾರೆ. ಇಲೆಕ್ಷನ್ ಕಮಿಷನ್ನವರಿಗೆ ಇದೆಲ್ಲ ಗೊತ್ತಾಗಲ್ವಾ? ಕೇಬಲ್ ಸೆಟ್ ಟಾಪ್ ಬಾಕ್ಸ್ಗಳನ್ನೆಲ್ಲ ಎತ್ಕೊಂಡು ಹೋಗಿ ಚುನಾವಣೆ ಆಯೋಗದ ಮುಂದೆ ಸುರಿಯೋಣ. ಮುನಿರತ್ನ ದುಡ್ಡು ಕೊಡೋದನ್ನೆಲ್ಲ ಎಲ್ರು ರೆಕಾರ್ಡ್ ಮಾಡ್ಕೊಳ್ಳಿ ಎಂದು ಕರೆಕೊಟ್ಟರು.
ದುಷ್ಟ ಶಕ್ತಿಗಳಿಂದ ಮುಕ್ತಿ ನೀಡುವ ಹಬ್ಬ ಇದು. ಅನಿಷ್ಟ ರಾಜಕಾರಣಿಯಿಂದ ಆರ್. ಆರ್. ನಗರಕ್ಕೆ ಮುಕ್ತಿ ಸಿಗಬೇಕು. ನಾನೇ ಇವರನ್ನು ಬಿಜೆಪಿಗೆ ಕಳಿಸಿದೆ ಅಂತ ಸೋಮಶೇಖರ್ ಹೇಳ್ತಾರೆ. ಸುಳ್ಳು ಹೇಳೋದಕ್ಕೆ ಏನಾದ್ರೂ ಲೆಕ್ಕಾಚಾರ ಇರಬೇಕು. ಇದು ಧರ್ಮಕ್ಕೂ ಅಧರ್ಮಕ್ಕೂ ನಡೆಯುತ್ತಿರೋ ಚುನಾವಣೆ ಎಂದರು.
ಪಕ್ಷದ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಮಾತನಾಡಿ, ನಾನು ಇದೇ ಕ್ಷೇತ್ರದಲ್ಲಿ ಇಲ್ಲಿಯೇ ಇದ್ದು ಎಲ್ಲವನ್ನು ತಿಳಿದಿದ್ದೇನೆ. ಜನಸೇವೆಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.
ಅಣ್ಣಮ್ಮ ದೇವಿಗೆ ಪೂಜೆ:
ಲಗ್ಗೆರೆ ಪ್ರಚಾರ ಸಭೆಗೆ ತೆರಳುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಕುಸುಮಾ.ಎಚ್ ಅವರು ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ನಗರದೇವತೆ ಅಣ್ಣಮ್ಮನ ಗುಡಿಯಲ್ಲಿ ಸಂಜೆ ಪೂಜೆ ಸಲ್ಲಿಸಿದರು.