ಬೆಂಗಳೂರು: ನಾಳೆ ಮಾಜಿ ಸಚಿವ ಡಿಕೆ ಶಿವಕುಮಾರ್, ಪತ್ನಿ ಉಷಾ ಹಾಗೂ ತಾಯಿ ಗೌರಮ್ಮ ನಾಳೆ ದಿಲ್ಲಿ ಹೈಕೋರ್ಟ್ನಲ್ಲಿ ವಿಚಾರಣೆ ಹಿನ್ನೆಲೆ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಪತ್ನಿ ಉಷಾ ಹಾಗೂ ತಾಯಿ ಗೌರಮ್ಮ ಅವರಿಗೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ನಲ್ಲಿ ನಡೆಸುವಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಅರ್ಜಿ ನಾಳೆ ದಿಲ್ಲಿ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಈ ಕಾರಣಕ್ಕಾಗಿ ಇಂದು ಸಂಜೆ ಡಿಕೆಶಿ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಇದೆ. ನಾಳೆ ದಿಲ್ಲಿ ಹೈಕೋರ್ಟ್ ಮನವಿಯನ್ನು ಪುರಸ್ಕರಿಸಿ ವಿಚಾರಣೆ ದಿಲ್ಲಿ ಬದಲು ಬೆಂಗಳೂರಿನಲ್ಲಿ ನಡೆಸಲು ವಿನಾಯಿತಿ ನೀಡಿದರೆ ನಾಳೆ ಸಂಜೆ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಇಲ್ಲವಾದರೆ ಅವರು ಅಲ್ಲೇ ಇದ್ದು ವಿಚಾರಣೆ ಎದುರಿಸಬೇಕಾಗಿ ಬರಲಿದೆ. ಮಧ್ಯಾಹ್ನದ ನಂತರ ಡಿಕೆಶಿ ವೈದ್ಯರನ್ನು ಸಂಪರ್ಕಿಸಿ, ಸಂಜೆ ದಿಲ್ಲಿಗೆ ಕುಟುಂಬ ಸಮೇತರವಾಗಿ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ. ತಾಯಿಗೆ ವಯಸ್ಸಾಗಿದೆ, ಅನಾರೋಗ್ಯ ಕೂಡ ಇದೆ. ಇದರಿಂದ ದಿಲ್ಲಿಗೆ ಆಗಮಿಸಿ, ಅಲ್ಲಿ ಇದ್ದುಕೊಂಡು ವಿಚಾರಣೆ ಎದುರಿಸುವುದು ಕಷ್ಟವಾಗಲಿದೆ. ಇದರಿಂದ ವಿಚಾರಣೆಯನ್ನು ಬೆಂಗಳೂರಿನಲ್ಲಿ ನಡೆಸಲು ಅನುವು ಮಾಡಿಕೊಡಿ ಎಂದು ಶಿವಕುಮಾರ್ ಪರ ವಕೀಲರು ದಿಲ್ಲಿ ಹೈಕೋರ್ಟ್ಗೆ ಮನವಿ ಮಾಡಿದ್ದು, ಇದರ ತೀರ್ಮಾನ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಕಡೆಯ ಕ್ಷಣದಲ್ಲಿ ಡಿಕೆಶಿ ಇಲ್ಲವೇ ಅವರ ಸೋದರ ಡಿ.ಕೆ. ಸುರೇಶ್ ದಿಲ್ಲಿಗೆ ತೆರಳಿ ವಕೀಲರ ಮೂಲಕ ಮನವಿ ಸಲ್ಲಿಸಿ, ಅದು ಫಲಕೊಡದಿದ್ದರೆ ತಾಯಿ ಹಾಗೂ ಪತ್ನಿಯನ್ನು ಕರೆದುಕೊಂಡು ಹೋಗುವ ಸಾಧ್ಯತೆಯೂ ಇದೆ. ಅನಾರೋಗ್ಯದ ಕಾರಣದಿಂದ ಶಿವಕುಮಾರ್ ನಗರದಲ್ಲೇ ಉಳಿದು, ಸುರೇಶ್ ಒಬ್ಬರೇ ಹೋಗಿ ಬಂದರೂ ಅಚ್ಚರಿಯಿಲ್ಲ.